ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾಪಡೆಗೆ ಸಹಾಯಕವಾಗುವ ಮತ್ತು ದೇಶದ ರಕ್ಷಣೆಗೆ ಮೀಸಲಾಗಿರುವ ಉಪಗ್ರಹವನ್ನು ಹೊತ್ತು ಬೃಹತ್ ಬಾಹುಬಲಿ ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್- 3 ಅನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಜ್ಜಾಗಿದೆ.
ಅತ್ಯಂತ ಭಾರದ ಈ ರಾಕೆಟ್ ಭಾನುವಾರ (ನವೆಂಬರ್ 2) ಸಂಜೆ 5.26ಕ್ಕೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಭಾರತದ ಬಾಹ್ಯಾಕಾಶ ಬಂದರಿನಿಂದ ಆಕಾಶಕ್ಕೆ ಜಿಗಿಯಲಿದೆ.
ʻಎಲ್‌ವಿಎಂ-ಎಂ5ʼ ರಾಕೆಟ್ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ. ಉಪಗ್ರಹವು 4,410 ಕೆಜಿ ತೂಕ ಹೊಂದಿದ್ದು, ದೇಶದ ಬಾಹ್ಯಾಕಾಶಕೇಂದ್ರದಿಂದ ಇದೇ ಮೊದಲ ಬಾರಿಗೆ ಉಡಾವಣೆ ಆಗುತ್ತಿರುವ ಭಾರೀ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೋ ತಿಳಿಸಿದೆ.
ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ-03) 15 ಮಹಡಿಯ ಕಟ್ಟಡದಷ್ಟು ಎತ್ತರ (43.5 ಮೀಟರ್) ಇದ್ದು, 4 ಸಾವಿರ ಕೆಜಿಯಷ್ಟು ಭಾರದ ಸಾಧನ ಒತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ಈ ರಾಕೆಟ್ ಅನ್ನು ʻಬಾಹುಬಲಿʼ ಎಂದು ಕರೆಯಲಾಗುತ್ತದೆ.
ಭಾರತೀಯ ನೌಕಾ ಸೇನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡಿರುವ ಈ ಉಪಗ್ರಹವನ್ನ ಜಿಸ್ಯಾಟ್-7ಆರ್ ಎಂದೂ ಕರೆಯಲಾಗಿದೆ. ಇದು ಯುದ್ಧ ನೌಕೆಗಳು, ಸಬ್‌ಮರೀನ್‌ಗಳು, ಯುದ್ಧ ವಿಮಾನಗಳು ಮತ್ತು ಭೂಮಿಯಲ್ಲಿರುವ ಕಮಾಂಡ್ ಕೇಂದ್ರಗಳ ನಡುವಿನ ಸಂವಹನವನ್ನು ಸುಧಾರಿಸಲಿದೆ. ಪ್ರಸ್ತುತ ಯೋಜನೆಗೆ 1,589 ಕೋಟಿ ರೂಪಾಯಿ ವೆಚ್ಚ ತಗಲಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ ಮತ್ತು ಭಾರತೀಯ ನೌಕಾಪಡೆಯ ನಡುವೆ 2019ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಸಿಎಂಎಸ್-03 ಉಪಗ್ರಹ 2013ರಲ್ಲಿ ಉಡಾವಣೆಗೊಂಡ ಹಳೆಯದಾದ ಜಿಸ್ಯಾಟ್-7 ರುಕ್ಮಿಣಿ ಉಪಗ್ರಹದ ಬದಲಿಗೆ ಕಾರ್ಯಾಚರಿಸಲಿದೆ.

