Friday, September 19, 2025

ಪಾಕ್, ಬಾಂಗ್ಲಾ ಹೋದಾಗ ಮನೆಯಂತೆ ಭಾಸವಾಯಿತು: ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ವಿವಾದ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳಿಗೆ ಭೇಟಿ ನೀಡಿದ್ದೆ. ಈ ವೇಳೆ ನನಗೆ ನನ್ನ ತಾಯ್ನಾಡಿನಲ್ಲೇ ಇದ್ದೇನೆಂಬ ಭಾವನೆ ಮೂಡಿಸಿತ್ತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ನಾಲಿಗೆ ಹರಿಬಿಟ್ಟಿದ್ದಾರೆ.

ಭಾರತದ ವಿದೇಶಾಂಗ ಇಲಾಖೆಯ ಕುರಿತು ಮಾತನಾಡಿದ ಅವರು, ವಿದೇಶಾಂಗ ನೀತಿಯಲ್ಲಿ ಬದಲಾವಣೆ ತಂದು ನೆರೆಹೊರೆಯ ಮೇಲೆ ಮೊದಲು ಗಮನಹರಿಸಬೇಕೆಂದು ಹೇಳಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳಿಗೆ ಭೇಟಿ ನೀಡಿದ್ದೆ. ಈ ವೇಳೆ ನನಗೆ ನನ್ನ ತಾಯ್ನಾಡಿನಲ್ಲೇ ಇದ್ದೇನೆಂಬ ಭಾವನೆ ಮೂಡಿಸಿತ್ತು . ನಮ್ಮ ವಿದೇಶಾಂಗ ನೀತಿಯು ಮೊದಲು ನಮ್ಮ ನೆರೆಹೊರೆಯ ಮೇಲೆ ಕೇಂದ್ರೀಕರಿಸಬೇಕು. ನಮ್ಮ ನೆರೆಹೊರೆಯವರೊಂದಿಗೆ ನಾವು ನಿಜವಾಗಿಯೂ ಸಂಬಂಧವನ್ನು ಗಣನೀಯವಾಗಿ ಸುಧಾರಿಸಬಹುದೇ? ಎಂಬುದರ ಕುರಿತು ಗಮನ ಹರಿಸಬೇಕು. ಅವರೆಲ್ಲರೂ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಅವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಗಳಿಗೆ ನೀಡಿದ ಭೇಟಿಗಳನ್ನು ನೆನಪಿಸಿಕೊಂಡ ಪಿತ್ರೋಡಾ, ಆ ಪ್ರವಾಸಗಳ ಸಮಯದಲ್ಲಿ ತಾವು ಯಾವಾಗಲೂ ಮನೆಯಲ್ಲಿರುವಂತೆ ಭಾಸವಾಗುತ್ತಿತ್ತು . ನಾನು ವಿದೇಶದಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ಅವರು ನನ್ನಂತೆ ಕಾಣುತ್ತಾರೆ, ಅವರು ನನ್ನಂತೆ ಮಾತನಾಡುತ್ತಾರೆ, ಅವರು ನನ್ನ ಹಾಡುಗಳನ್ನು ಇಷ್ಟಪಡುತ್ತಾರೆ, ಅವರು ನನ್ನ ಆಹಾರವನ್ನು ತಿನ್ನುತ್ತಾರೆ. ನಾವು ಅವರೊಂದಿಗೆ ಶಾಂತಿ ಮತ್ತು ಸಾಮರಸ್ಯದಿಂದ ಬದುಕಲು ಕಲಿಯಬೇಕು ಎಂದು ಅವರು ಹೇಳಿದರು.

ಅವೆಲ್ಲಾ ಸಣ್ಣ ದೇಶಗಳು, ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ನಾವು ಯುದ್ದಕ್ಕೆ ಹೋಗುವುದಲ್ಲ. ಭಯೋತ್ಪಾದನೆ ಸೇರಿದಂತೆ ಹಲವು ಸಮಸ್ಯೆಗಳು ಆ ದೇಶಗಳಲ್ಲಿದೆ. ಆದರೆ ನಮಗೆ ಅವರು ನೆರೆ ರಾಷ್ಟ್ರಗಳು, ನಾವು ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಸ್ಯಾಮ್ ಪಿತ್ರೋಡ ವಿವಾದಿತ ಹೇಳಿಕೆಯನ್ನು ಬಿಜೆಪಿ ಪ್ರಶ್ನಿಸಿದೆ. ರಾಹುಲ್ ಗಾಂಧಿಯ ಮಾರ್ಗದರ್ಶಕ, ವಿದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ ಹೇಳಿಕೆಯಿಂದ ಕಾಂಗ್ರೆಸ್ ನಡೆ ಸ್ಪಷ್ಟವಾಗಿದೆ.2008ರಲ್ಲಿ ಮಂಬೈನ ಮೇಲೆ ಅಜ್ಮಲ್ ಕಸಬ್ ಸೇರಿ ಉಗ್ರರು ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಪಾಕಿಸ್ತಾನ ಸೇನೆ, ಐಎಸ್ಐ ನೆರವಿನಿಂದ ಈ ದಾಳಿ ನಡೆದಿತ್ತು. ಎಲ್ಲಾ ದಾಖಲೆ ಮುಂದಿದ್ದರೂ ಕಾಂಗ್ರೆಸ್ ಪಾಕಿಸ್ತಾನಕ್ಕೆ ಪಾಠ ಕಲಿಸಲಿಲ್ಲ. ಪ್ರತಿ ದಾಳಿ ನಡೆಸಲಿಲ್ಲ. ಕಾರಣ ಪಾಕಿಸ್ತಾನ ಕಾಂಗ್ರೆಸ್‌ಗೆ ಮನೆ ಇದ್ದಂತೆ. ಹೀಗಾಗಿ ದಾಳಿ ನಡೆಸುವ ಮಾತೇ ಇರಲಿಲ್ಲ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.

ಇದನ್ನೂ ಓದಿ