January20, 2026
Tuesday, January 20, 2026
spot_img

ಚೆಸ್ ಆಟದ ಮೂಲ ಭಾರತ ಅನ್ನೋದು ಹೆಮ್ಮೆ: ಡಾ. ಶೈಲೇಂದ್ರ ಬೆಲ್ದಾಳೆ

ಹೊಸದಿಗಂತ ವರದಿ ಬೀದರ್:

ಬೀದರ್ ಚೆಸ್ ಅಸೋಶಿಯೇಶನ್ ಹಾಗೂ ರೋಟ್ರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯುರಿ ಇವರ ಸಹಯೋಗದಲ್ಲಿ ನಗರದ ಶಿವನಗರದಲ್ಲಿರುವ ರಾಮ ಸಮರ್ಥ ಫಂಕ್ಷನ್ ಹಾಲ್‌ನಲ್ಲಿ ಜನವರಿ 18ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂತರ್‌ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ 80 ವರ್ಷದೊಳಗಿನ ಹಿರಿಯ ನಾಗರಿಕರಿಗೆ ಮುಕ್ತವಾಗಿದ್ದ ಈ ಪಂದ್ಯಾವಳಿಯನ್ನು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ. ಶೈಲೇಂದ್ರ ಬೆಲ್ದಾಳೆ, ಚೆಸ್ ಆಟದ ಮೂಲ ಭಾರತವೇ ಆಗಿದೆ ಎಂಬುದು ಹೆಮ್ಮೆಯ ಸಂಗತಿ. ಕ್ರಿ.ಶ.6ನೇ ಶತಮಾನದಲ್ಲಿ ಭಾರತದಲ್ಲಿ ಚತುರಂಗ ಹೆಸರಿನಿಂದ ಈ ಆಟ ಆರಂಭವಾದ ಉಲ್ಲೇಖಗಳಿವೆ. ಇದೀಗ ವಿಶ್ವದಾದ್ಯಂತ ಚೆಸ್ ಪ್ರಸಿದ್ಧ ಆಟವಾಗಿದೆ. ಬರುವ ವರ್ಷ ರಾಷ್ಟ್ರಮಟ್ಟದ ಸ್ಪರ್ಧೆ ನಡೆಸಬೇಕು. ಇದಕ್ಕೆ 1ಲಕ್ಷ ರೂ.ನೀಡುವೆ. ಮುಕ್ತ ಪಂದ್ಯಾವಳಿಯಾಗಿರುವುದರಿದ ಗ್ರಾಮೀಣ ಪ್ರತಿಭೆಗಳಿಗೆ ಸಹ ಇಂತಹ ವೇದಿಕೆಗಳಲ್ಲಿ ಭಾಗವಹಿಸಲು ಹೆಚ್ಚಿನ ಪ್ರೋತ್ಸಾಹ ದೊರಕುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೀದರ್ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ಜ್ಯೋತಿಮಯಾನಂದ ಮಾತನಾಡಿ, ಚೆಸ್ ಆಟವು ವಿದ್ಯಾರ್ಥಿಗಳ ಬುದ್ಧಿಮತ್ತೆ, ಏಕಾಗ್ರತೆ ಹಾಗೂ ನಿರ್ಧಾರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಜೀವನ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಚದುರಂಗದಾಟ ಅತ್ಯಂತ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮೊಬೈಲ್ ಮತ್ತು ವಿಡಿಯೋ ಗೇಮ್‌ಗಳಿಗೆ ಮಾರುಹೋಗುವ ಬದಲು ಇಂತಹ ಬೌದ್ಧಿಕ ಕ್ರೀಡಾಕೂಟಗಳಲ್ಲಿ ಯುವಕರು ಭಾಗವಹಿಸಬೇಕೆಂದು ಕರೆ ನೀಡಿದರು. ಕಳೆದ ವರ್ಷ ಜ.12ರಂದು ಸ್ವಾಮಿ ವಿವೇಕಾನಂದರ ಜಯಂತಿಯಂದು ಆಶ್ರಮದಲ್ಲಿ ಚೆಸ್ ಕೋಚಿಂಗ್ ಸೆಂಟರ್ ಆರಂಭಿಸಲಾಗಿದ್ದು, ಶನಿವಾರ ಸಂಜೆ ಹಾಗೂ ಭಾನುವಾರ ಬೆಳಿಗ್ಗೆ ತರಬೇತಿ ನೀಡಲಾಗುತ್ತಿದೆ. ಬೇಸಿಗೆ ರಜಾದಿನಗಳಲ್ಲಿ ವಾರಪೂರ್ತಿ ತರಬೇತಿ ಶಿಬಿರಗಳನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಬೀದರ್ ಮಾತ್ರವಲ್ಲದೆ ಇತರ ಜಿಲ್ಲೆಗಳು ಹಾಗೂ ನೆರೆಹೊರೆಯ ರಾಜ್ಯಗಳಿಂದ ಒಟ್ಟು 328 ಸ್ಪರ್ಧಾಳುಗಳು ಹಾಗೂ ಮೂವರು ದೃಷ್ಟಿಹೀನ ಸ್ಪರ್ಧಾಳುಗಳು ಭಾಗವಹಿಸಿದ್ದು, ಸ್ಪರ್ಧೆಗೆ ವಿಶೇಷ ಮೆರುಗು ತಂದರು.

ಈ ಸಂದರ್ಭದಲ್ಲಿ ಪಂದ್ಯಾವಳಿಯ ಅಧ್ಯಕ್ಷರಾದ ಡಾ. ಚಂದ್ರಕಾಂತ ಕುಲಕರ್ಣಿ, ಬೀದರ್ ಚೆಸ್ ಅಸೋಶಿಯೇಶನ್ ಅಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಸತೀಶ ಸ್ವಾಮಿ, ರೋಟ್ರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯುರಿ ಅಧ್ಯಕ್ಷ ನಾಗೇಶ ಪಾಟೀಲ, ರೋಟ್ರಿಯನ್ನರಾದ ರಾಜಕುಮಾರ ಅಳ್ಳೆ, ಹಾವಶೆಟ್ಟಿ ಪಾಟೀಲ್, ವಿಕ್ರಮ ತಗಾರೆ, ರಾಹುಲ್ ಅಟ್ಟಲ್, ಡಾ. ಮಲ್ಲಿಕಾರ್ಜುನ ಚಟನಳ್ಳಿ, ಡಾ. ರಘು ಕೃಷ್ಣಮೂರ್ತಿ, ಡಾ. ಆರತಿ ರಘು, ಸಚ್ಚಿದಾನಂದ ಚಿದ್ರೆ, ನಿತಿನ್ ಗೋಯಲ್, ಶಂಕರರಾವ ಕೊಟ್ಟರಕಿ, ಶಾಹೀನ ಪಟೇಲ್, ಗಣಜಾನ್ ಡಿ. ಪೋಕಲ್ವಾರ್, ವಿಜಯಕುಮಾರ್ ಬಿರಾದಾರ್, ಪ್ರಭು ತಟಪಟ್ಟಿ, ಬಸವಂಜಲಿ ಎಂ. ಚಟನಳ್ಳಿ, ರೂಪಾಲಿ ಎನ್. ಕರ್ಪೂರ್, ಅನ್ನಪೂರ್ಣಾ ಎಸ್. ಸ್ವಾಮಿ, ತ್ರಿಶಾಲಾ ಶೆಟ್ಕಾರ್, ಶಿವಕುಮಾರ್, ಸುರೇಶ್ ಕುಮಾರ್ ಬಿರಾದಾರ್, ಶ್ರುತಿ ಪೋಕಲ್ವಾರ್, ಅನುರಾಧಾ ತಟಪಟ್ಟಿ, ಡಾ. ಶ್ರುತಿ ವಿ. ಬಿರಾದಾರ್, ಶಿವಾನಿ ತಗಾರೆ, ಗೋಪಾಲಕೃಷ್ಣ ಕೆ. ಸೇರಿದಂತೆ ಅನೇಕ ಗಣ್ಯರು ಹಾಗೂ ಚೆಸ್ ಪ್ರೇಮಿಗಳು ಉಪಸ್ಥಿತರಿದ್ದರು.

Must Read