January20, 2026
Tuesday, January 20, 2026
spot_img

ಸುಳ್ಳು ಆರೋಪಗಳಿಗೆ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯ: ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ನಾಯಕರು ತನ್ನ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರನ್ನೇ ಆಸರೆಯಾಗಿ ಬಳಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ಬಿಜೆಪಿಯ ಮಾಜಿ ಶಾಸಕರೊಬ್ಬರು ಗಮನ ಸೆಳೆಯುವ ಉದ್ದೇಶದಿಂದ ಅಸಂಬದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ತರ್ಕವಿಲ್ಲದ ಮತ್ತು ಸತ್ಯಾಧಾರವಿಲ್ಲದ ಹೇಳಿಕೆಗಳಿಗೆ ಉತ್ತರಿಸುವುದು ಸಮಯ ವ್ಯರ್ಥವಾದರೂ, ಸಾರ್ವಜನಿಕ ಜೀವನದಲ್ಲಿರುವ ಸಚಿವನಾಗಿ ಸುಳ್ಳು ಆರೋಪಗಳಿಗೆ ಸ್ಪಷ್ಟನೆ ನೀಡುವುದು ತನ್ನ ಕರ್ತವ್ಯ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯ ಮೂಲೆಯಲ್ಲಿ ಇಡಲಾಗಿದ್ದ ಹಳೆಯ ದಾಖಲೆಗಳನ್ನು ಮುಂದಿಟ್ಟು ಆಧಾರರಹಿತ ಆರೋಪ ಮಾಡಲಾಗಿದೆ ಎಂದು ವ್ಯಂಗ್ಯವಾಡಿದ ಅವರು, ಗುರಿಯೇ ಇಲ್ಲದ ಆರೋಪಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ಗುಡ್ಡ ಅಗೆಯುವವರಿಗೆ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು, ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

15ನೇ ಹಣಕಾಸು ಆಯೋಗದ ಅನುದಾನ ವಿತರಣೆಯ ಕುರಿತು ಸ್ಪಷ್ಟನೆ ನೀಡಿದ ಸಚಿವರು, ಜನಸಂಖ್ಯೆ ಮತ್ತು ಭೌಗೋಳಿಕ ಆಧಾರದ ಮೇಲೆ ಕೇಂದ್ರ ಹಾಗೂ ರಾಜ್ಯ ಮಾರ್ಗಸೂಚಿಗಳಂತೆ ಹಣ ಬಿಡುಗಡೆ ಆಗುತ್ತದೆ ಎಂದು ಹೇಳಿದ್ದಾರೆ. ಈ ಅನುದಾನದಲ್ಲಿ ಶೇ.60 ನಿರ್ಬಂಧಿತ ಹಾಗೂ ಶೇ.40 ಅನಿರ್ಬಂಧಿತ ನಿಧಿಯಾಗಿದ್ದು, ಗ್ರಾಮಸಭೆಗಳ ಮೂಲಕ ಕ್ರಿಯಾಯೋಜನೆ ರೂಪಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲೇ ಕಾಮಗಾರಿ ಅನುಷ್ಠಾನವಾಗುತ್ತದೆ ಎಂದು ವಿವರಿಸಿದ್ದಾರೆ.

ಇ-ಗ್ರಾಮ್ ಸ್ವರಾಜ್ ಪೋರ್ಟಲ್‌ನಲ್ಲಿ ಯೋಜನೆಗಳ ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆಯೇ ಹೊರತು, ಸರ್ಕಾರದ ಪೂರ್ವಾನುಮೋದನೆ ಅಗತ್ಯವಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

Must Read