March 22, 2026
Sunday, March 22, 2026
spot_img

ಕಾಲ ನಿಂತು ಹೋಗಿ, ಮನಸು, ಬದುಕು ಮಾತನಾಡಲು ಶುರುವಾಗಿದ್ದ ಆ ಲಾಕ್‌ಡೌನ್‌ಗೆ ಈಗ ಆರು ವರ್ಷ!

ನೆನಪಿದ್ಯಾ ಆ ದಿನ ಮಾರ್ಚ್ 22 ರಂದು ಪ್ರಧಾನಿ ಮೋದಿಯವರು ಫಸ್ಟ್ ಟೈಮ್ COVID-19 ಹೆಚ್ಚಾಗ್ತಿದೆ ಅಂತ ಒಂದು ದಿನದ ಜನತಾ ಕರ್ಫ್ಯೂ ಜಾರಿ ಮಾಡಿದ್ರು. ಒಂದು ದಿನ ತಾನೇ ಅಂತ ಸುಮ್ನಿದ್ವಿ. ಅದಾದ್ಮೇಲೆ ಕೋವಿಡ್ ಮತ್ತೆ ಜಾಸ್ತಿಯಾಗ್ತಿದೆ ಅಂತ 21 ದಿನದ ಲಾಕ್‌ಡೌನ್‌ ಆಗುತ್ತೆ ಅಂತ ಘೋಷಣೆ ಮಾಡಿದ್ರು. ಆದ್ರೆ ನಾವೆಲ್ಲ 21 ದಿನ ತಾನೇ ಬೇಗನೆ ಮುಗಿದು ಬಿಡುತ್ತೆ ಅಂತ ಮನೆಯಲ್ಲೇ ಕೂತು ದಿನ ಲೆಕ್ಕ ಹಾಕೋಕೆ ಶುರು ಮಾಡಿದ್ವಿ. ಆದ್ರೆ ಆ 21 ದಿನ ಮುಗಿದು ಯಾವಾಗ ತಿಂಗಳು ಗಟ್ಟಲೆ ಆಗೋಯ್ತು ಅಂತ ಗೊತ್ತೇ ಆಗಿಲ್ಲ.

ಕಿಟಕಿಯಿಂದ ಹೊರಗೆ ಇಣುಕಿ ನೋಡಿದ್ರೆ ರಸ್ತೆಗಳಲ್ಲಿ ನಿಶ್ಶಬ್ದ, ಮನೆಗಳೊಗೇ ಕೂತಿದ್ರು ಜೈಲಿನಲ್ಲಿರೋ ಅನುಭವ ಬದುಕು ಒಂದು ಕ್ಷಣದಲ್ಲಿ ಬದಲಾಗಿತ್ತು. ಲಾಕ್‌ಡೌನ್ ಎಂಬ ಪದವು ಕೇವಲ ಮಿತಿಯಲ್ಲ, ಅದು ಮಾನವ ಜೀವನದ ಮೇಲೆ ನಡೆದ ಒಂದು ದೊಡ್ಡ ಪರೀಕ್ಷೆಯಾಗಿತ್ತು.

ಲಾಕ್‌ಡೌನ್ ನಮಗೆ ಕೇವಲ ಮನೆಯೊಳಗೆ ಇರಲು ಹೇಳಿಕೊಟ್ಟಿಲ್ಲ, ನಮ್ಮೊಳಗೆ ನಮ್ಮನ್ನು ನೋಡಿಕೊಳ್ಳಲು ಕಲಿಸಿತು. ಯಾವಾಗಲೂ ಹೊರಗಿನ ಜಗತ್ತಿನಲ್ಲಿ ಓಡಾಡುತ್ತಿದ್ದ ನಾವು, ಮೊದಲ ಬಾರಿಗೆ ನಮ್ಮ ಮನಸ್ಸಿನ ಜೊತೆ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದ್ದೇವೆ. ಕುಟುಂಬದ ಜೊತೆ ಕೂತು ಮಾತನಾಡುವುದು, ಅಡುಗೆ ಮಾಡುವುದು, ಪುಸ್ತಕ ಓದುವುದು ಇವೆಲ್ಲವೂ ಮತ್ತೆ ನಮ್ಮ ಬದುಕಿನ ಭಾಗವಾಗಿಬಿಟ್ಟವು. ಕೆಲವು ಸಂಬಂಧಗಳು ಈ ಅವಧಿಯಲ್ಲಿ ಗಟ್ಟಿಯಾಗಿದ್ದರೆ, ಕೆಲವು ಬಿರುಕು ಬಿಟ್ಟ ಮನಸ್ಸುಗಳು ಚೂರಾಗಿದ್ದವು.

ಆದರೆ ಈ ಕಥೆಯ ಇನ್ನೊಂದು ಮುಖ ತುಂಬಾನೇ ಕರಾಳವಾಗಿತ್ತು. ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಉದ್ಯೋಗ ಕಳೆದುಕೊಂಡವರು ಇವರಿಗೆ ಲಾಕ್‌ಡೌನ್ ಒಂದು ದೊಡ್ಡ ಹೋರಾಟವಾಗಿತ್ತು. ಮನೆಗೆ ಹೋಗಲು ನೂರಾರು ಕಿಲೋಮೀಟರ್ ನಡೆದು ಹೋದ ಜನರ ಚಿತ್ರಣಗಳು ಇನ್ನೂ ಮನಸ್ಸನ್ನು ಕಾಡುತ್ತವೆ. ಆ ನೋವು ಕೇವಲ ಸುದ್ದಿಗಳಲ್ಲೇ ಅಲ್ಲ, ನಮ್ಮ ನಿಮ್ಮ ಹೃದಯದಲ್ಲೂ ಅಚ್ಚು ಮೂಡಿಸಿದೆ.

COVID-19 ನಮಗೆ ಏನ್ ಕಲಿಸಿದ್ಯೋ ಇಲ್ಲವೋ ಗೊತ್ತಿಲ್ಲ ಆದ್ರೆ, ಕೈಗಳನ್ನು ಅದೆಷ್ಟು ಸಲ ಸೋಪ್ ಹಾಕಿ ತಿಕ್ಕಿ ತಿಕ್ಕಿ ತೊಳೆದಿದ್ದೇವೋ, ಸ್ಯಾನಿಟೈಸರ್ ಅಂದ್ರೇನು ಅಂತಾನೇ ಗೊತ್ತಿಲ್ಲದವರು ಕೂಡ ಅದೆಷ್ಟು ಸಲ ಹಾಕಿ ಎಷ್ಟು ಉಜ್ಜಿದ್ದೇವೋ ಆ ದೇವರಿಗೆ ಗೊತ್ತು. ಅದ್ರ ಜೊತೆಗೆ ಮಾಸ್ಕ್ ಹಾಕೋದೇನು, ಅಂತರ ಕಾಯ್ದುಕೊಳ್ಳೋದೇನು, ಇವೆಲ್ಲವೂ ನಮ್ಮ ದಿನಚರಿಯ ಅವಿಭಾಜ್ಯ ಭಾಗವಾಗಿಬಿಟ್ಟಿದ್ದವು. ಸಣ್ಣ ಸಣ್ಣ ಅಭ್ಯಾಸಗಳೇ ಜೀವ ರಕ್ಷಿಸುವ ಮಾರ್ಗಗಳಾಗಿದ್ದವು. ಒಂದು ಸ್ಯಾನಿಟೈಸರ್ ಬಾಟಲ್, ಒಂದು ಮಾಸ್ಕ್ ಇದು ನಮ್ಮ ಭದ್ರತೆಯ ಸಂಕೇತಗಳಾಗಿಬಿಟ್ಟಿದ್ದವು.

ಇದೇ ಸಮಯದ್ಲಲಿ ಕೂಡ ನಮಗೆ ಮಾನವೀಯತೆ ಏನು ಅನ್ನೋದು ಗೊತ್ತಾಗಿದ್ದು… ಪರಿಚಯವಿಲ್ಲದವರಿಗೂ ಸಹಾಯ ಮಾಡಿದವರು, ಹಸಿದವರಿಗೆ ಊಟ ನೀಡಿದವರು, ದಿನ-ರಾತ್ರಿ ಶ್ರಮಿಸಿದ ವೈದ್ಯರು ಮತ್ತು ಪೊಲೀಸರು ಇವರ ತ್ಯಾಗಗಳು ನಮಗೆ ದೊಡ್ಡ ಪಾಠ ಕಲಿಸಿತು. ಭಯದ ನಡುವೆ ಸಹಾಯ ಮಾಡುವ ಕೈಗಳು ಎಷ್ಟು ಶಕ್ತಿವಂತವಾಗಿರುತ್ತವೆ ಎಂಬುದನ್ನು ನಾವು ಅರಿತುಕೊಂಡಿದ್ದೆವು.

ಇಷ್ಟಕ್ಕೆ ಮುಗಿತಾ? ಖಂಡಿತ ಇಲ್ಲ, ಲಾಕ್‌ಡೌನ್ ನಮಗೆ ಸ್ವಾತಂತ್ರ್ಯಅನ್ನೋದು ಏನು ಅಂತ ಚೆನ್ನಾಗಿಯೇ ಹೇಳಿಕೊಟ್ಟಿತು. ಹೊರಗೆ ಹೋಗುವುದು, ಸುತ್ತಾಡೋದು, ಸ್ನೇಹಿತರನ್ನು ಭೇಟಿಯಾಗೋದು, ಇವೆಲ್ಲವೂ ಎಷ್ಟು ಅಮೂಲ್ಯ ಅನ್ನೋದು ತಿಳ್ಕೊಂಡ್ವಿ. ನಾವು ಸಾಮಾನ್ಯ ಅಂತ ಅನ್ಕೊಂಡಿದ್ದ ಬದುಕೇ ಒಂದು ವಿಶೇಷವಾದ ಉಡುಗೊರೆ, ಅದೇ ಅಮೂಲ್ಯ ಅಂತ ತಿಳಿದುಕೊಂಡ್ವಿ. ನಮ್ಮ ಕಥೆ ಇಷ್ಟೊಂದು ಹೀನಾಯವಾಗಿತ್ತು ಅಂದ್ರೆ ಈ ಮೃಗಾಲಯದಲ್ಲಿರೋ ಪ್ರಾಣಿಗಳ ಕಥೆ ಏನು ಅಂತ ನಮಗೂ ಗೊತ್ತಾಗಿತ್ತು. ನಮಗೆ ಸ್ವಲ್ಪ ಸಮಯ ನಮ್ಮದೇ ಮನೆಯೊಳಗಡೆ ಇರೋಕಾಗದೆ ಒದ್ದಾಡಿದ್ದೇವೆ, ಈ ಪ್ರಾಣಿಗಳು ಹುಟ್ಟಿದಾಗಿನಿಂದ ಸಾಯೋ ತನಕ ತಮ್ಮ ಸ್ವಾತಂತ್ರ್ಯವನ್ನು ಬಿಟ್ಟು ಅದ್ಹೇಗೆ ಬದುಕುತ್ತವೋ ಅನ್ನೋದು ಯಕ್ಷ ಪ್ರಶ್ನೆಯಾಗಿ ಈಗಲೂ ಉಳಿದುಬಿಟ್ಟಿದೆ.

ಇಂದು 6 ವರ್ಷಗಳ ನಂತರ, ಜೀವನ ಮತ್ತೆ ತನ್ನ ಹಳೆಯ ವೇಗಕ್ಕೆ ಮರಳಿದೆ. ಆದರೆ ಆ ದಿನಗಳು ನಮಗೆ ಒಂದು ಶಾಶ್ವತ ಪಾಠವನ್ನು ಬಿಟ್ಟು ಹೋಗಿವೆ ಬದುಕು ಯಾವಾಗ ಬೇಕಾದರೂ ಬದಲಾಗಬಹುದು. ಆದ್ದರಿಂದ ಪ್ರತಿ ಕ್ಷಣವನ್ನೂ ಮೌಲ್ಯಯುತವಾಗಿ ಬದುಕಬೇಕು.

ಆ ದಿನಗಳಲ್ಲಿ ನಾವು ದೂರವಿದ್ದರೂ, ಮನಸ್ಸುಗಳು ಹತ್ತಿರವಾಗಿದ್ದವು. ಇಂದು ಮತ್ತೆ ಹತ್ತಿರವಾಗಿದ್ದರೂ, ಆ ಬಂಧಗಳನ್ನು ಮರೆಯಬಾರದು. ಲಾಕ್‌ಡೌನ್ ನಮ್ಮ ಬದುಕಿನ ವೇಗವನ್ನು ತಡೆದು ನಿಲ್ಲಿಸಿರಬಹುದು, ಆದರೆ ಬದುಕಿನ ಅರ್ಥವನ್ನು ಚೆನ್ನಾಗಿ ಕಲಿಸಿಬಿಟ್ಟು ಹೋಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !