Sunday, January 11, 2026

ಪೊಲೀಸ್ ಗನ್ ಅಲ್ಲ, ಅದು ಖಾಸಗಿ ‘ರಿವಾಲ್ವರ್’! ಬಳ್ಳಾರಿ ಕೇಸ್‌ನಲ್ಲಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಹರಿದ ವಿವಾದ ಹಾಗೂ ಗುಂಡಿನ ಚಕಮಕಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತನಿಖೆಯನ್ನು ಸಿಐಡಿಗೆ ವಹಿಸಲು ಮುಂದಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಬಳ್ಳಾರಿ ಗಲಾಟೆಯಲ್ಲಿ ಗುಂಡು ಹಾರಿರುವುದು ಖಾಸಗಿ ವ್ಯಕ್ತಿಗಳ ಬಳಿಯಿದ್ದ ಗನ್‌ನಿಂದ ಎಂಬುದು ಎಡಿಜಿಪಿ ನೀಡಿದ ಮಾಹಿತಿಯಿಂದ ಸ್ಪಷ್ಟವಾಗಿದೆ. ಪೊಲೀಸ್ ಗನ್‌ನಿಂದ ಯಾವುದೇ ಫೈರಿಂಗ್ ಆಗಿಲ್ಲ. ಈಗಾಗಲೇ ಸ್ಥಳೀಯ ಖಾಸಗಿ ಗನ್‌ಮ್ಯಾನ್‌ಗಳ ಬಳಿಯಿದ್ದ ರಿವಾಲ್ವರ್ ಮತ್ತು ಗನ್‌ಗಳನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಸ್ಪಷ್ಟಪಡಿಸಿದರು.

ಯಾವ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ವಶಪಡಿಸಿಕೊಂಡ ಆಯುಧಗಳು ಹಾಗೂ ಸಿಕ್ಕಿರುವ ಬುಲೆಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಜ್ಞರ ವರದಿ ಬಂದ ಕೂಡಲೇ ಸತ್ಯಾಸತ್ಯತೆ ಹೊರಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಆರೋಪಿಗಳನ್ನು ಬಂಧಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಸಚಿವ ಶ್ರೀರಾಮುಲು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, “ಬಂಧನ ಮಾಡುವುದು ದೊಡ್ಡ ಕೆಲಸವಲ್ಲ. ಆದರೆ ಕಾನೂನು ಚೌಕಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯಬೇಕಿದೆ. ತನಿಖೆ ಪೂರ್ಣಗೊಂಡು ಗುಂಡು ಯಾರ ಗನ್‌ನಿಂದ ಹಾರಿದೆ ಎಂಬುದು ಪಕ್ಕಾ ಆದ ಕೂಡಲೇ ಪೊಲೀಸರು ಬಂಧನ ಪ್ರಕ್ರಿಯೆ ಆರಂಭಿಸಲಿದ್ದಾರೆ,” ಎಂದರು.

error: Content is protected !!