Friday, November 14, 2025

ಶಾಹೀನ್ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾಳೆ ಎಂಬುದು ನಂಬಲು ಇನ್ನೂ ಅಸಾಧ್ಯ: ಮಾಜಿ ಪತಿ, ಸಹೋದರ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಂಗ್ರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ವೈದ್ಯೆ ಡಾ. ಶಾಹೀನಾ ಸೈಯದ್‌ ಕುರಿತು ಆಕೆಯ ಮಾಜಿ ಪತಿ ಮಾತನಾಡಿದ್ದಾರೆ.

ಶಾಹೀನಾ ನನ್ನನ್ನು ತೊರೆದು ಹೋದ ನಂತರ ಆಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಆಕೆ ಎಲ್ಲಿ ಹೋದಳು ಎಂಬ ಬಗ್ಗೆ ಸುಳಿವು ಇರಲಿಲ್ಲ, ಹೀಗಾಗಿ ಅವಳ ಬಗ್ಗೆ ಅನುಮಾನವಿತ್ತು ಎಂದು ಶಾಹೀನಾ ಸೈಯದ್ ಮಾಜಿ ಪತಿ ಹೇಳಿದ್ದಾರೆ. ಅವರಿಗೆ ಶಾಹೀನಾ ಜೊತೆ 2003ರಲ್ಲಿ ಮದುವೆಯಾಗಿತ್ತು. 2013ರಲ್ಲಿ ಅವರು ಪರಸ್ಪರ ದೂರಾಗಿದ್ದರು.

ಈ ಬಗ್ಗೆ ಮಾತನಾಡಿದ ಶಾಹೀನಾ ಮಾಜಿ ಪತಿ, ಆಕೆ ಯುರೋಪ್‌ಗೆ ಸ್ಥಳಾಂತರ ಆಗಬೇಕೆಂದು ಬಯಸಿದ್ದಳು. ಆದರೆ ಆಕೆ ನಮ್ಮಿಂದ ದೂರ ಆದ ನಂತರ ಆಕೆಯ ಜೊತೆ ನಮಗೆ ಯಾವುದೇ ಸಂಪರ್ಕ ಇರಲಿಲ್ಲ. ,ಅವಳು ಹೊರಟು ಹೋಗಬೇಕೆಂದು ಬಯಸಿದ್ದಳು, ನಾನು ಸರಿ ಹೋಗು ಎಂದೆ, ನಾನು ಇನ್ನೇನು ಮಾಡಬಹುದಿತ್ತು ಎಂದು ಅವರು ಹೇಳಿದ್ದಾರೆ.

ನಾನು ಆಕೆಗೆ ವಿಚ್ಛೇದನ ನೀಡಿರಲಿಲ್ಲ, ಆಕೆ ಅವಳ ಇಷ್ಟದಂತೆ ಹೊರಟು ಹೋಗಿದ್ದಳು, ಆದರೆ ಎಲ್ಲಿ ಹೋಗುವೆ ಎಂದು ಆಕೆ ಹೇಳಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಶಾಹೀನಾಳ ಅಣ್ಣ ಮೊಹಮ್ಮದ್ ಶೋಯೇಬ್ ಹೇಳೋದೇನು?
ತನ್ನ ಶಾಹೀನ್ ಕಾನೂನುಬಾಹಿರವಾದ ಯಾವುದೇ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬುದನ್ನು ಒಪ್ಪಿಕೊಳ್ಳಲು ತಮ್ಮ ಕುಟುಂಬ ಇನ್ನೂ ಹೆಣಗಾಡುತ್ತಿದೆ ಎಂದು ಅಣ್ಣ ಮೊಹಮ್ಮದ್ ಶೋಯೇಬ್ ಹೇಳಿದರು.

ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದ್ದಾರೆ ಆದರೆ ಕುಟುಂಬವನ್ನು ಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ತನಿಖಾಧಿಕಾರಿಗಳು ಮನೆಯನ್ನು ಶೋಧಿಸಿ, ನೀವು ಈಗ ನನ್ನನ್ನು ಕೇಳುತ್ತಿರುವಂತೆಯೇ ಪ್ರಶ್ನೆಗಳನ್ನು ಕೇಳಿದರು . ತನಿಖಾಧಿಕಾರಿಗಳು ನನ್ನ ತಂದೆ ಅಥವಾ ನನ್ನನ್ನು ಕಠಿಣವಾಗಿ ನಡೆಸಿಕೊಂಡಿಲ್ಲ. ನಮ್ಮನ್ನು ಏನನ್ನೂ ಹೇಳಲು ಯಾವುದೇ ಒತ್ತಡ ಅಥವಾ ಬಲಪ್ರಯೋಗ ಮಾಡಲಾಗಿಲ್ಲ. ನನ್ನ ಸಹೋದರಿ ನಮ್ಮನ್ನು ಭೇಟಿ ಮಾಡುವುದನ್ನು ನಿಲ್ಲಿಸಿದ ವಿಷಯವಾಗಿ ಮಾತ್ರ ಕೇಳಿದರು ಎಂದು ತಿಳಿಸಿದ್ದಾರೆ.

ನಮಗೆ ಯಾವುದೇ ಸಂಪರ್ಕವಿಲ್ಲ. ನಾವು ಕೊನೆಯದಾಗಿ ಮಾತನಾಡಿ ನಾಲ್ಕು ವರ್ಷಗಳಾಗಿವೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಅವರ ಪೋಷಕರು ಸಾಂದರ್ಭಿಕವಾಗಿ ಆಕೆಯೊಂದಿಗೆ ಮಾತನಾಡುತ್ತಿದ್ದರು ಎಂದು ಶೋಯೆಬ್ ಹೇಳಿದ್ದಾರೆ.

ಪೋಷಕರು ಸ್ವಾಭಾವಿಕವಾಗಿ ತಮ್ಮ ಮಕ್ಕಳು ಹೇಗಿದ್ದಾರೆಂದು ಕೇಳಲು ಕರೆ ಮಾಡುತ್ತಿದ್ದರು. ನಾನು ಅವಳ ಅಣ್ಣ, ಖಂಡಿತ, ನಾನು ಅವಳ ಬಗ್ಗೆಯೂ ಚಿಂತೆ ಮಾಡುತ್ತೇನೆ. ಅದು ಸಾಮಾನ್ಯವಲ್ಲವೇ? ಅವರು ಹೇಳಿದರು.

ಅವಳು ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾಗಲೂ, ಅವಳು ಯಾವುದೇ ಅನುಮಾನಾಸ್ಪದ ಕೆಲಸದಲ್ಲಿ ಭಾಗಿಯಾಗಿರುವ ಯಾವುದೇ ಸೂಚನೆ ಇರಲಿಲ್ಲ. ನಾನು ಇನ್ನೂ ಈ ಆರೋಪಗಳನ್ನು ನಂಬುವುದಿಲ್ಲ ಎಂದು ಅವರು ಹೇಳಿದ್ದಾರೆ.

error: Content is protected !!