ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ. ಮಹೇಶ್ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿದ್ದಂತೆಯೇ, ಅಸಮಾಧಾನಿತ ಶಾಸಕ ಜಿ.ಟಿ. ದೇವೇಗೌಡರು ಕೊನೆಗೂ ಮೌನ ಮುರಿದಿದ್ದಾರೆ. ಜೆಡಿಎಸ್ ಬಿಡುತ್ತಾರೆ ಎಂಬ ಚರ್ಚೆಗಳಿಗೆ ತೆರೆ ಎಳೆದಿರುವ ಅವರು, “ನಾನು ಜೆಡಿಎಸ್‌ನಲ್ಲೇ ಇದ್ದೇನೆ, ಎಲ್ಲೂ ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಪಕ್ಷದ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದ ಜಿಟಿಡಿ, ಈ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ. “ಕೆಲವು ವಿಚಾರಗಳಲ್ಲಿ ನನಗೆ ನೋವಾಗಿರುವುದು ನಿಜ, ಅದು ನಾಯಕರಿಗೂ ತಿಳಿದಿದೆ. ಹಾಗಂತ ನಾನು ಪಕ್ಷದಿಂದ ಹೊರಬಂದಿಲ್ಲ. ಕಾಲ ಕಳೆದಂತೆ ಎಲ್ಲ ನೋವುಗಳು ಮಾಯವಾಗುತ್ತವೆ, ಒಳ್ಳೆಯ ಸಮಯ ಬಂದೇ ಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ನಿಷ್ಠೆಯ ಬಗ್ಗೆ ಪ್ರಶ್ನೆ ಎತ್ತಿದವರಿಗೆ ಉತ್ತರಿಸಿದ ಅವರು, “ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹೋದ ಮೇಲೆ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಕಟ್ಟಿದ್ದು ಇದೇ ಜಿ.ಟಿ. ದೇವೇಗೌಡ. ಕುಮಾರಸ್ವಾಮಿಯವರು ಸಿಎಂ ಆಗಬೇಕೆಂದು ಶ್ರಮಿಸಿದ್ದೇನೆ. ದ್ರೋಹ ಮಾಡುವ ಬುದ್ಧಿ ನನಗಿಲ್ಲ. ಮುಂದಿನ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ, ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ” ಎಂದರು.
MLC ಚುನಾವಣೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪಗಳ ನಡುವೆಯೂ, ಜಿಟಿಡಿ ಅವರು ಸದ್ಯಕ್ಕೆ ‘ದಳ’ ಬಿಡುವ ಲಕ್ಷಣ ತೋರುತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಹೊಗಳುವ ಮೂಲಕ ಜೆಡಿಎಸ್‌ಗೆ ಮುಜುಗರ ತಂದಿದ್ದರೂ, ಈಗ “ಜೆಡಿಎಸ್‌ನಲ್ಲಿ ಗಟ್ಟಿಯಾಗಿ ಇರುತ್ತೇನೆ” ಎನ್ನುವ ಮೂಲಕ ಹೈಕಮಾಂಡ್‌ಗೆ ಶಾಂತಿ ಸಂದೇಶ ರವಾನಿಸಿದ್ದಾರೆ.



