ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಸ್ಟಾರ್ ಆಲ್-ರೌಂಡರ್ ರವೀಂದ್ರ ಜಡೇಜಾ ಅವರ ಪಾಲಿಗೆ ಈಗ ನಿಜಕ್ಕೂ ಶುಕ್ರದೆಸೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉಪನಾಯಕನಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜಡೇಜಾ ಅವರ ಸಾಧನೆಯ ಬೆನ್ನಲ್ಲೇ, ಅವರ ಪತ್ನಿ ರಿವಾಬಾ ಸೋಲಂಕಿ ಜಡೇಜಾ ಅವರು ರಾಜಕೀಯದಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿದ್ದಾರೆ.
ಗುಜರಾತ್ ರಾಜಕೀಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಇದರಿಂದ ಗುಜರಾತ್ ಸಚಿವ ಸಂಪುಟವನ್ನು ಪುನರ್‌ರಚಿಸಲಾಯಿತು. ಈ ನೂತನ ಸಂಪುಟದಲ್ಲಿ ರವೀಂದ್ರ ಜಡೇಜಾ ಅವರ ಪತ್ನಿ, ಯುವ ನಾಯಕಿ ರಿವಾಬಾ ಜಡೇಜಾ ಅವರಿಗೆ ಸಚಿವ ಸ್ಥಾನ ಲಭಿಸಿದ್ದು, ಅವರು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಯುವ ಎಂಜಿನಿಯರ್‌ನಿಂದ ಪ್ರಭಾವಿ ಸಚಿವರವರೆಗೆ
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರೆ ಆಗಿರುವ ರಿವಾಬಾ ಜಡೇಜಾ, ರಾಜಕೀಯಕ್ಕೆ ಬರುವ ಮುನ್ನ ರಜಪೂತ ಕರ್ಣಿ ಸೇನೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ರಿವಾಬಾ, 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿ ಗೆಲುವು ಸಾಧಿಸಿದರು. ‘ಮಾತೃಶಕ್ತಿ’ ಎಂಬ ಚಾರಿಟಬಲ್ ಟ್ರಸ್ಟ್ ಮೂಲಕ ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ಅವರು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.