Wednesday, December 24, 2025

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೀಕರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ತತ್ತರಿಸಿ ಹೋಗಿದ್ದು, ಭೂ ಕುಸಿತ, ಪ್ರವಾಹ ಹಾಗೂ ಮಳೆಯಿಂದಾಗಿ ಸಂಭವಿಸಿದ ಅನಾಹುತದಿಂದ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಕಳೆದೆರಡು ದಿನಗಳಿಂದ ನಿರಂತರ ಮಳೆಯಿಂದಾಗಿ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ. ಇದರ ಜೊತೆಗೆ ಮಳೆ ಸಂಬಂಧಿತ ಅವಘಡದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ರೆಸಾಯಿಯ ಅರ್ಧ್ ಕುವರಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಅತಿಹೆಚ್ಚಿನ ಸಾವು ನೋವು ಇಲ್ಲಿ ಸಂಭವಿಸಿದೆ. ಇವರೆಲ್ಲರೂ ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಪಂಜಾಬ್ನಿಂದ ಆಗಮಿಸಿದ್ದ ಯಾತ್ರಾರ್ಥಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಕನಿಷ್ಠ ಇತರ 20 ಮಂದಿ ಗಾಯಗೊಂಡಿದ್ದಾರೆ. ದೋಡಾದಲ್ಲಿ ನಾಲ್ಕು ಸಾವು ವರದಿಯಾಗಿದೆ. ಭೂಕುಸಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 9 ಲಕ್ಷ ರೂಪಾಯಿ ಪರಿಹಾರವನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಕಟಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೂಕುಸಿತ ಘಟನೆಯಲ್ಲಿ ಮೃತಪಟ್ಟ ರಾಜ್ಯದ ಯಾತ್ರಿಕರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪ್ರತಿಕೂಲ ಹವಾಮಾನದಲ್ಲಿ ಕೂಡಾ ವೈಷ್ಣೋದೇವಿ ಮಂದಿರಕ್ಕೆ ಚಾರಣದಲ್ಲಿ ಹೋಗಲು ಯಾತ್ರಿಗಳಿಗೆ ಅಧಿಕಾರಿಗಳು ಏಕೆ ಅವಕಾಶ ನೀಡಿದರು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದು, ಮಾತಾವೈಷ್ಣೋದೇವಿ ಮಂದಿರಕ್ಕೆ ಚಾರಣ ತೆರಳುತ್ತಿದ್ದ ಯಾತ್ರಿಗಳ ಸಾವಿನ ಸುದ್ದಿಯಿಂದ ತೀವ್ರ ದುಃಖವಾಗಿದೆ. ಅವರನ್ನು ಏಕೆ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಿಲ್ಲ. ಈ ಬಗ್ಗೆ ಚರ್ಚಿಸಬೇಕಿದೆ ಎಂದು ಹೇಳಿದ್ದಾರೆ.ಇದೇ ವೇಳೆ ನೆರವಿನ ಭರವಸೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ನಡುವೆ ಸಾಂಬಾ ಮಾರ್ಗದಲ್ಲಿ ಪ್ರಯಾಣಿಕರ ವಾಹನಗಳು ಸ್ಥಗಿತಗೊಂಡಿದ್ದು, ಭದೇರ್ವಾ ನಗರದಲ್ಲಿರೋ ಗುಪ್ತ ಗಂಗಾ ದೇವಾಲಯ ಜಲಾವೃತವಾಗಿದೆ. ಲಖಿಂಪುರ ಟೋಲ್ ಪ್ಲಾಜಾ ಕಥುವಾ ಪ್ರವಾಹದಲ್ಲಿ ಧ್ವಂಸಗೊಂಡಿದೆ.

error: Content is protected !!