ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರದಂದು ಈಶಾನ್ಯ ಜಪಾನ್‌ನಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಇದು ಐದನೇ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 6.7 ರಷ್ಟು ದಾಖಲಾದ ಕಂಪನದ ತೀವ್ರತೆಯಿಂದಾಗಿ ಜನರಲ್ಲಿ ಭೀತಿ ಹೆಚ್ಚಾಗಿದೆ. ಈವರೆಗಿನ ಮಾಹಿತಿ ಪ್ರಕಾರ, ಈ ಘಟನೆಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭೂಕಂಪದ ಕೇಂದ್ರಬಿಂದುವು ಮೇಲ್ಮೈಯಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಇತ್ತು. ಇಷ್ಟು ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪವು ಹೆಚ್ಚಿನ ಹಾನಿಯನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಹಾನಿಯ ನಿಖರ ಪ್ರಮಾಣವನ್ನು ಅಂದಾಜಿಸಲು ಭದ್ರತಾ ಸಂಸ್ಥೆಗಳು ಮಾಹಿತಿ ಸಂಗ್ರಹದಲ್ಲಿ ತೊಡಗಿವೆ.
ಜಪಾನ್ ಹವಾಮಾನ ಸಂಸ್ಥೆಯು ಭೂಕಂಪದ ನಂತರ ತಕ್ಷಣವೇ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಸುಮಾರು 1 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ.
ಹೊಕ್ಕೈಡೋದ ಮಧ್ಯ ಪೆಸಿಫಿಕ್ ಕರಾವಳಿ, ಅಮೋರಿ ಪ್ರಿಫೆಕ್ಚರ್, ಇವಾಟೆ ಪ್ರಿಫೆಕ್ಚರ್, ಮಿಯಾಗಿ ಪ್ರಿಫೆಕ್ಚರ್‌ಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ನಿರಂತರ ಎಚ್ಚರಿಕೆಯಲ್ಲಿರಲು ಸೂಚಿಸಲಾಗಿದೆ.
ಈ ವಾರದ ಆರಂಭದಲ್ಲಿ ಹೊನ್ಶು ದ್ವೀಪದ ಉತ್ತರದ ತುದಿಯಲ್ಲಿರುವ ಅಮೋರಿ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಆ ಘಟನೆಯಲ್ಲಿ ಕನಿಷ್ಠ 34 ಜನರು ಗಾಯಗೊಂಡಿದ್ದರು. ಆ ಭೂಕಂಪವು ಪೆಸಿಫಿಕ್ ಮಹಾಸಾಗರದ ಕರಾವಳಿಯಲ್ಲಿ ಬಿರುಕುಗಳು ಮತ್ತು ಸಣ್ಣ ಪ್ರಮಾಣದ ಸುನಾಮಿಯನ್ನು ಸಹ ಸೃಷ್ಟಿಸಿತ್ತು. ಈ ಭಾರಿ ಕಂಪನದ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದೊಡ್ಡ ಭೂಕಂಪ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ.
ಭೂಕಂಪದ ಹಿನ್ನೆಲೆಯಲ್ಲಿ, ಹಲವಾರು ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ಕರಾವಳಿ ಹೆದ್ದಾರಿಗಳನ್ನು ಮುಚ್ಚಲಾಯಿತು. ಸ್ಥಳೀಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಜನರಿಗೆ ತಕ್ಷಣ ತಮ್ಮ ಮನೆಗಳಿಂದ ಹೊರಬಂದು ಸುರಕ್ಷಿತ ತೆರೆದ ಪ್ರದೇಶಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಲಾಯಿತು.

