ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರೀಡಾ ಇತಿಹಾಸಕ್ಕೆ ಹೊಸ ಮೈಲುಗಲ್ಲು ಸೇರ್ಪಡೆಯಾಗಿದೆ. 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣದ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ, ಮಹಿಳೆಯರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಮೊದಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ತಂದುಕೊಟ್ಟಿದ್ದಾರೆ. ಫೈನಲ್‌ನಲ್ಲಿ ಅವರು ಪೋಲೆಂಡ್‌ನ ಜೂಲಿಯಾ ಸ್ಜೆರೆಮೆಟಾ ಅವರನ್ನು 4-1 ಅಂತರದಿಂದ ಮಣಿಸಿ ಹೊಸ ಇತಿಹಾಸವನ್ನು ಬರೆದಿದ್ದಾರೆ.
ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಜೈಸ್ಮಿನ್, ಆ ನೋವನ್ನು ಶ್ರಮಕ್ಕೆ ಮಾರ್ಪಡಿಸಿಕೊಂಡರು. ಫೈನಲ್‌ನಲ್ಲಿ ಅನುಭವೀ ಸ್ಪರ್ಧಿ ಜೂಲಿಯಾ ಎದುರು ಮೊದಲ ಸುತ್ತು ಕಷ್ಟಕರವಾಗಿದ್ದರೂ, ನಂತರದ ಎರಡು ಸುತ್ತಿನಲ್ಲಿ ಜೈಸ್ಮಿನ್ ಆಕ್ರಮಣಕಾರಿ ಆಟ ತೋರಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
“ವಿಶ್ವ ಚಾಂಪಿಯನ್ ಆದ ಖುಷಿ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕಳೆದ ಒಂದು ವರ್ಷ ನಿರಂತರ ಅಭ್ಯಾಸದಿಂದ ನನ್ನನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ತಾಂತ್ರಿಕವಾಗಿ ಸಿದ್ಧಪಡಿಸಿಕೊಂಡಿದ್ದೇನೆ. ಇವತ್ತು ಅದಕ್ಕೆ ಫಲ ಸಿಕ್ಕಿದೆ,” ಎಂದು ಗೆಲುವಿನ ಬಳಿಕ ಜೈಸ್ಮಿನ್ ಭಾವುಕರಾದರು.
ಈ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಬಾಕ್ಸರ್‌ಗಳೇ ಭಾರತದ ಗೌರವ ಹೆಚ್ಚಿಸಿದರು. ಜೈಸ್ಮಿನ್ ಚಿನ್ನ ತಂದುಕೊಟ್ಟರೆ, ಪೂಜಾ ರಾಣಿ ಕಂಚು ಪಡೆದರು. ನೂಪುರ್ 80 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದು ಪದಕಪಟ್ಟಿ ಪೂರ್ಣಗೊಳಿಸಿದರು. ಒಟ್ಟಾರೆ ಮೂರು ಪದಕಗಳೊಂದಿಗೆ ಭಾರತೀಯ ಮಹಿಳಾ ಬಾಕ್ಸರ್‌ಗಳು ಜಗತ್ತಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿದರು.