ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಡಿಜಿಟಲ್ ಕ್ರಾಂತಿಯ ಹರಿಕಾರ ‘ಜಿಯೋ’ ಈಗ ವಿಮೆ ಲೋಕದಲ್ಲೂ ಅಬ್ಬರಿಸಲು ಸಜ್ಜಾಗಿದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (JFSL) ಮತ್ತು ಜಾಗತಿಕ ಮಟ್ಟದ ವಿಮಾ ಸಂಸ್ಥೆ ಅಲಿಯಾನ್ಜ್ ಗ್ರೂಪ್ ಜಂಟಿಯಾಗಿ ‘ಅಲಿಯಾನ್ಜ್ ಜಿಯೋ ರಿಇನ್ಷೂರೆನ್ಸ್ ಲಿಮಿಟೆಡ್’ ಎಂಬ ಹೊಸ ಸಂಸ್ಥೆಯನ್ನು ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ಇಳಿಸಿವೆ.
ಕಳೆದ ಮಾರ್ಚ್ 12, 2026ರಂದು ಭಾರತೀಯ ವಿಮೆ ನಿಯಂತ್ರಣ ಪ್ರಾಧಿಕಾರ (IRDAI) ದಿಂದ ಹಸಿರು ನಿಶಾನೆ ಪಡೆದಿದ್ದ ಈ ಸಂಸ್ಥೆ, ಈಗ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ತೆರೆಯುವ ಮೂಲಕ ಕಾರ್ಯಾರಂಭ ಮಾಡಿದೆ. ಇದು ಕೇವಲ ಒಂದು ಕಂಪನಿಯ ಉದಯವಲ್ಲ, ಬದಲಿಗೆ ಭಾರತದ ವಿಮೆ ಮಾರುಕಟ್ಟೆಯಲ್ಲಿ ಜಾಗತಿಕ ತಂತ್ರಜ್ಞಾನ ಮತ್ತು ಸ್ಥಳೀಯ ಭರವಸೆಯ ಅಪರೂಪದ ಸಂಗಮ.
“2047ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವಿಮೆ” ಎಂಬ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಈ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ.
ಏಷ್ಯಾ-ಪೆಸಿಫಿಕ್ ವಲಯದಲ್ಲಿ ಸುಮಾರು 17 ವರ್ಷಗಳ ಕಾಲ ರಿಇನ್ಷೂರೆನ್ಸ್ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಸೋನಿಯಾ ರಾವಲ್ ಅವರು ಈ ನೂತನ ಸಂಸ್ಥೆಯ ಸಿಇಒ ಆಗಿ ಸಾರಥ್ಯ ವಹಿಸಲಿದ್ದಾರೆ.
ಅಲಿಯಾನ್ಜ್ ಸಂಸ್ಥೆಯ ಅಂತಾರಾಷ್ಟ್ರೀಯ ಮಟ್ಟದ ರಿಸ್ಕ್ ಸಲ್ಯೂಷನ್ಸ್ ಹಾಗೂ ಜಿಯೋ ಸಂಸ್ಥೆಯ ಡಿಜಿಟಲ್ ಇಕೋ-ಸಿಸ್ಟಮ್ ಒಂದಾಗಿ, ಗ್ರಾಹಕರಿಗೆ ಅತ್ಯಂತ ಸುರಕ್ಷಿತ ಮತ್ತು ಸುಲಭ ವಿಮೆ ಸೇವೆಗಳನ್ನು ನೀಡಲಿವೆ.
“ಅಲಿಯಾನ್ಜ್ ಜೊತೆಗಿನ ನಮ್ಮ ಈ ದೀರ್ಘಕಾಲೀನ ಪ್ರಯಾಣದಲ್ಲಿ ಇದೊಂದು ಮಹತ್ವದ ಮೈಲುಗಲ್ಲು. ವಿಮೆ ವಲಯದ ಸರ್ವತೋಮುಖ ಬೆಳವಣಿಗೆಗೆ ಇದು ನಾಂದಿ ಹಾಡಲಿದೆ.” ಎಂದು ಎಂದು ಜಿಯೋ ಫೈನಾನ್ಷಿಯಲ್‌ನ ಸಿಇಒ ಹಿತೇಶ್ ಸೇಥಿಯಾ ಖುಷಿ ಹಂಚಿಕೊಂಡಿದ್ದಾರೆ.
“ಭಾರತದ ವಿಮೆದಾರರಿಗೆ ನಾವು ಜಾಗತಿಕ ಗುಣಮಟ್ಟದ ರಿಸ್ಕ್ ಮ್ಯಾನೇಜ್‌ಮೆಂಟ್ ನೀಡಲಿದ್ದೇವೆ. ಇದು ನಮ್ಮ ಸ್ಥಿರ ಬೆಳವಣಿಗೆಯ ಮೊದಲ ಹೆಜ್ಜೆ.” ಎಂದು ಅಲಿಯಾನ್ಜ್ ಎಸ್‌ಇ ಆಡಳಿತ ಮಂಡಳಿ ಸದಸ್ಯ ಕ್ರಿಸ್ ಟೌನ್‌ಸೆಂಡ್ ತಿಳಿಸಿದ್ದಾರೆ.



