ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ಗುರುವಾರದಂದು ಪ್ರಮುಖ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ್ದು, ಇದರ ಅಡಿಯಲ್ಲಿ ಭಾರತದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯನ್ನು ವೇಗವಾಗಿ ವಿಸ್ತರಿಸಲು ಎರಡೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ.
ಈ ಪಾಲುದಾರಿಕೆ ಪ್ರಮುಖ ಅಂಶವೆಂದರೆ ಜಿಯೋ ಬಳಕೆದಾರರು 18 ತಿಂಗಳವರೆಗೆ ಗೂಗಲ್ ಎಐ ಪ್ರೊ ಪ್ಲಾನ್ ಗೆ ಉಚಿತ ಬಳಕೆ ಅವಕಾಶವನ್ನು ಪಡೆಯುತ್ತಾರೆ. ಈ ಆಫರ್ ಪ್ರತಿ ಬಳಕೆದಾರರಿಗೆ ಸುಮಾರು ರೂ. 35,100 ಮೌಲ್ಯದ್ದಾಗಿದೆ. ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ವಿಸ್ತೃತ ಅವಕಾಶಗಳು ದೊರೆಯುತ್ತವೆ. ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್‌ಬುಕ್ ಎಲ್ಎಂಗೆ ಹೆಚ್ಚಿನ ಪ್ರವೇಶ ಮತ್ತು 2 ಟಿಬಿ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಳನ್ನು ಸಹ ಈ ಆಫರ್‌ನಲ್ಲಿ ಸೇರಿಸಲಾಗಿದೆ.
ಆರಂಭದಲ್ಲಿ ಈ ವೈಶಿಷ್ಟ್ಯವು 18 ರಿಂದ 25 ವರ್ಷ ವಯಸ್ಸಿನ ಜಿಯೋ ಬಳಕೆದಾರರಿಗೆ ಲಭ್ಯವಿರುತ್ತದೆ. ಆದರೆ ನಂತರ ಜಿಯೋದ ಎಲ್ಲ ಬಳಕೆದಾರರು ಇದಕ್ಕೆ ಅವಕಾಶವನ್ನು ಪಡೆಯುತ್ತಾರೆ. ಕಂಪನಿಯು ಈ ಎಐ ವೈಶಿಷ್ಟ್ಯವನ್ನು 5ಜಿ ಅನ್‌ಲಿಮಿಟೆಡ್ ಯೋಜನೆಗಳನ್ನು ಹೊಂದಿರುವ ಜಿಯೋ ಗ್ರಾಹಕರಿಗೆ ಮಾತ್ರ ಒದಗಿಸುತ್ತದೆ. ರಿಲಯನ್ಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮತ್ತು ಗೂಗಲ್ ಜಂಟಿಯಾಗಿ ಈ ವಿಶೇಷ ಎಐ ವೈಶಿಷ್ಟ್ಯವನ್ನು ಜಿಯೋ ಗ್ರಾಹಕರಿಗೆ ತಂದಿವೆ. ಪ್ರತಿ ಭಾರತೀಯ ಗ್ರಾಹಕ, ಸಂಸ್ಥೆ ಮತ್ತು ಡೆವಲಪರ್ ಅನ್ನು ಎಐನೊಂದಿಗೆ ಜೋಡಿಸುವುದು ಇದರ ಗುರಿಯಾಗಿದೆ.
ಪಾಲುದಾರಿಕೆಯು ರಿಲಯನ್ಸ್‌ನ ಎಲ್ಲರಿಗೂ ಎಐ ದೃಷ್ಟಿಕೋನಕ್ಕೆ ಹೊಂದಿಕೆ ಆಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, 145 ಕೋಟಿ ಭಾರತೀಯರಿಗೆ ಎಐ ಸೇವೆಗಳು ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಗೂಗಲ್‌ನಂತಹ ದೀರ್ಘಕಾಲೀನ ಪಾಲುದಾರರೊಂದಿಗೆ ನಾವು ಭಾರತವನ್ನು ಕೇವಲ ಎಐ-ಸಕ್ರಿಯಗೊಳಿಸುವುದಷ್ಟೇ ಅಲ್ಲದೆ, ಪ್ರತಿ ನಾಗರಿಕ ಮತ್ತು ಸಂಸ್ಥೆಯು ಎಐ ಬಳಸಿ ಅಭಿವೃದ್ಧಿ ಹೊಂದಲು ಕೃತಕ ಬುದ್ಧಿಮತ್ತೆ-ಸಕ್ರಿಯಗೊಳಿಸಬೇಕು ಎಂದು ಬಯಸುತ್ತೇವೆ ಎಂದರು.
ಭಾರತದ ಡಿಜಿಟಲ್ ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ರಿಲಯನ್ಸ್ ಪ್ರಮುಖ ಪಾಲುದಾರ. ಈಗ ನಾವು ಈ ಸಹಯೋಗವನ್ನು ಎಐ ಯುಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಉಪಕ್ರಮವು ಗೂಗಲ್ ನ ಅತ್ಯಾಧುನಿಕ ಎಐ ಪರಿಕರಗಳನ್ನು ಭಾರತೀಯ ಗ್ರಾಹಕರು, ವ್ಯವಹಾರಗಳು ಮತ್ತು ಡೆವಲಪರ್‌ಗಳಿಗೆ ತರುತ್ತದೆ, ಎಂದು ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಹೇಳಿದರು.
ಭಾರತವು ಜಾಗತಿಕ ಎಐ ಕೇಂದ್ರ ಆಗುವುದಕ್ಕೆ ಸಹಾಯ ಮಾಡಲು, ರಿಲಯನ್ಸ್ ಮತ್ತು ಗೂಗಲ್ ಸೇರಿ ಭಾರತದ ಕಂಪನಿಗಳಿಗೆ ಸುಧಾರಿತ ಎಐ ಹಾರ್ಡ್‌ವೇರ್, ಅಂದರೆ ಟೆನ್ಸರ್ ಪ್ರೊಸೆಸಿಂಗ್ ಯೂನಿಟ್‌ಗಳು ಬಳಕೆಯನ್ನು ವಿಸ್ತರಿಸುತ್ತವೆ. ಇದು ಭಾರತೀಯ ವ್ಯವಹಾರಗಳು ದೊಡ್ಡ ಮತ್ತು ಸಂಕೀರ್ಣ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

