Sunday, January 11, 2026

ಆ್ಯಶಸ್ 5ನೇ ಟೆಸ್ಟ್‌ನಲ್ಲಿ ಜೋ ರೂಟ್ ಭರ್ಜರಿ ಶತಕ: 384 ರನ್‌ಗೆ ಇಂಗ್ಲೆಂಡ್ ಆಲೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆ್ಯಶಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಅನುಭವೀ ಬ್ಯಾಟರ್ ಜೋ ರೂಟ್ ತಮ್ಮ ಶ್ರೇಷ್ಠ ಫಾರ್ಮ್ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಇನಿಂಗ್ಸ್‌ಗೆ ಭದ್ರತೆ ನೀಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 57 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಔಟಾಗಿ ಪೆವಿಲಿಯನ್ ಸೇರಿದರು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್, ಹ್ಯಾರಿ ಬ್ರೂಕ್ ಜೊತೆಗೂಡಿ ಇನಿಂಗ್ಸ್ ಅನ್ನು ಕಟ್ಟುವ ಹೊಣೆ ಹೊತ್ತರು. ಇವರಿಬ್ಬರ ಮಧ್ಯೆ 5ನೇ ವಿಕೆಟ್‌ಗೆ 169 ರನ್‌ಗಳ ಮಹತ್ವದ ಜೊತೆಯಾಟ ಮೂಡಿಬಂತು.

97 ಎಸೆತಗಳಲ್ಲಿ 84 ರನ್ ಗಳಿಸಿದ ಹ್ಯಾರಿ ಬ್ರೂಕ್ ಔಟಾದರೂ, ಮತ್ತೊಂದು ತುದಿಯಲ್ಲಿ ನಿಂತ ಜೋ ರೂಟ್ ಜವಾಬ್ದಾರಿಯುತ ಆಟ ಮುಂದುವರಿಸಿದರು. 242 ಎಸೆತಗಳನ್ನು ಎದುರಿಸಿದ ಅವರು 15 ಫೋರ್‌ಗಳೊಂದಿಗೆ 160 ರನ್ ಕಲೆಹಾಕಿ ಆಕರ್ಷಕ ಶತಕ ದಾಖಲಿಸಿದರು.

ಇದನ್ನೂ ಓದಿ: FOOD | ಸಾಫ್ಟ್ & ಟೇಸ್ಟಿ ಬಾಳೆಹಣ್ಣಿನ ಮುಳ್ಕ ನೀವೂ ಟ್ರೈ ಮಾಡಿ! ರೆಸಿಪಿ ತುಂಬಾ ಸಿಂಪಲ್

ಈ ಶತಕದೊಂದಿಗೆ ಜೋ ರೂಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರೆ, ಜಾಕ್ ಕಾಲಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ ಇದೀಗ 41 ಟೆಸ್ಟ್ ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಜೋ ರೂಟ್ ಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 384 ರನ್ ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಮೈಕೆಲ್ ನೇಸರ್ 4 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಕಬಳಿಸಿದರು.

error: Content is protected !!