ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಉತ್ಪಾದನಾ ವಲಯದ ಬೆಳವಣಿಗೆ ಕುರಿತಂತೆ ನಡೆಯುತ್ತಿರುವ ರಾಜಕೀಯ ಚರ್ಚೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ತಿರುವು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಯನ್ನು ಅವರು ತಳ್ಳಿಹಾಕಿ, ವಾಸ್ತವ ಅಂಕಿ ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ನಿಜಾಂಶಗಳನ್ನು ಒಪ್ಪಿಕೊಳ್ಳಬೇಕಿದೆ ಎಂದು ಜೋಶಿ ಹೇಳಿದ್ದಾರೆ.
ಜಾಗತಿಕ ಕಂಪನಿಗಳಾದ ಫಾಕ್ಸ್‌ಕಾನ್ ಮುಂತಾದವುಗಳು ಭಾರತದಲ್ಲಿ ಹೂಡಿಕೆ ಹೆಚ್ಚಿಸುತ್ತಿರುವುದು ಮೇಕ್ ಇನ್ ಇಂಡಿಯಾದ ಯಶಸ್ಸಿನ ಸ್ಪಷ್ಟ ಉದಾಹರಣೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲೇ ಫಾಕ್ಸ್‌ಕಾನ್ ಘಟಕ ಸ್ಥಾಪನೆಗೆ ಬಿಜೆಪಿ ಆಡಳಿತದ ಅವಧಿಯಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು ಎಂಬುದನ್ನು ಕಾಂಗ್ರೆಸ್ ಮರೆತಿದೆ ಎಂದು ಟೀಕಿಸಿದರು.
ಇದನ್ನೂ ಓದಿ:
ಪಿಎಲ್‌ಐ ಯೋಜನೆಯಿಂದ 14 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಆಕರ್ಷಿತವಾಗಿದ್ದು, 2025ರೊಳಗೆ ಸುಮಾರು 1.32 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ವಿವರಿಸಿದರು. 2014–15ರಲ್ಲಿ 0.18 ಲಕ್ಷ ಕೋಟಿ ರೂಪಾಯಿ ಇದ್ದ ಮೊಬೈಲ್ ಉತ್ಪಾದನೆ ಇಂದು 5.5 ಲಕ್ಷ ಕೋಟಿ ರೂಪಾಯಿಗೆ ಏರಿದೆ. ರಫ್ತು ಕೂಡ 0.01 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಾಗಿದೆ.
ಇದು ಎನ್‌ಡಿಎ ಸರ್ಕಾರದ ನೀತಿಗಳ ಫಲ ಎಂದು ಜೋಶಿ ಸ್ಪಷ್ಟಪಡಿಸಿದರು. ಸುಧಾರಣೆಗಳ ಸಾಧನೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ತನ್ನ ರಾಜಕೀಯ ಹತಾಶೆಯನ್ನು ಪ್ರದರ್ಶಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

