Wednesday, October 22, 2025

ಜುಬಿಲಿ ಹಿಲ್ಸ್ ಉಪಚುನಾವಣೆ | ಮತದಾರರ ಪಟ್ಟಿಯಲ್ಲಿ ಅಕ್ರಮ: ಬಿಆರ್‌ಎಸ್ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೂ ಮುನ್ನ ರಾಜಕೀಯದಲ್ಲಿ ಬಿಸಿ ಏರಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಆರ್‌ಎಸ್ ನಡುವೆ ವಾಕ್ಸಮರ ತೀವ್ರಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಗಂಭೀರ ಆರೋಪ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಟಿಆರ್, ಮತದಾರರ ಪಟ್ಟಿಯನ್ನು ವ್ಯವಸ್ಥಿತವಾಗಿ ತಿರುಚಲಾಗುತ್ತಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದರು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರೂ ಸ್ಪಂದನೆ ದೊರಕಿಲ್ಲದ ಕಾರಣ, ಬಿಆರ್‌ಎಸ್ ಹೈಕೋರ್ಟ್ ಮೊರೆ ಹೋಗಲಿದೆ ಎಂದು ಘೋಷಿಸಿದರು.

ಅವರು ‘2023ರ ಚುನಾವಣೆಯ ಬಳಿಕ ಸುಮಾರು 23,000 ನಕಲಿ ಮತದಾರರನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದರು. ಕೇವಲ 80 ಚದರ ಗಜದ ಮನೆಯಲ್ಲಿ 23 ಮತಗಳು ನೋಂದಾಯಿಸಿವೆ, ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲಿ 43 ಮತದಾರರ ಹೆಸರುಗಳಿವೆ. ಇದು ಪ್ರಜಾಪ್ರಭುತ್ವದ ಹಗಲು ದರೋಡೆ,’ ಎಂದು ಕೆಟಿಆರ್ ಆಕ್ರೋಶ ವ್ಯಕ್ತಪಡಿಸಿದರು.

ಕೆಟಿಆರ್ ಚುನಾವಣಾ ಆಯೋಗದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿ, “ನಾವು ಸಾಕ್ಷ್ಯಗಳೊಂದಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನಕಲಿ ಮತದಾರರ ಹೆಸರುಗಳನ್ನು ತೆಗೆದು ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.

error: Content is protected !!