ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮ್ರದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿಆರ್ ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿ 100ಕ್ಕೂ ಅಧಿಕ ವಿಪಕ್ಷಗಳ ಸಂಸದರು ಲೋಕಸಭೆಯಲ್ಲಿ ಮಂಗಳವಾರ ನಿರ್ಣಯ ಮಂಡಿಸಿದ್ದಾರೆ.
ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪವನ್ನು ಬೆಳಗಿಸಲು ಅವಕಾಶ ನೀಡಿ ನ್ಯಾಯಮೂರ್ತಿ ಜಿಅರ್ ಸ್ವಾಮಿನಾಥನ್ ತೀರ್ಪು ನೀಡಿದ್ದರು. ಇದು ತಮಿಳುನಾಡು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ನ್ಯಾಯಮೂರ್ತಿಗಳ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಇಂಡಿಯಾ ಒಕ್ಕೂಟದ ಸಂಸದರ ಬೆಂಬಲದೊಂದಿಗೆ ವಾಗ್ದಂಡನೆಯ ನಿರ್ಣಯವನ್ನು ಲೋಕಸಭೆಯ ಸ್ಪೀಕರ್‌ಗೆ ಮಂಡಿಸಿದ್ದಾರೆ.
ಡಿಸೆಂಬರ್ 9 ರಂದು ಸಂವಿಧಾನದ 124 ನೇ ವಿಧಿಯೊಂದಿಗೆ ಓದಲಾದ 217 ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಈ ನಿರ್ಣಯವನ್ನು ಮಂಡಿಸಲಾಗಿದೆ.
ಸಹಿ ಮಾಡಿದವರಲ್ಲಿ (107) ಡಿಎಂಕೆ ನಾಯಕರಾದ ಟಿ.ಆರ್. ಬಾಲು, ಎ. ರಾಜಾ, ಕನಿಮೋಳಿ ಮತ್ತು ದಯಾನಿಧಿ ಮಾರನ್, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಗೌರವ್ ಗೊಗೊಯ್ ಮತ್ತು ಮಾಣಿಕ್ಕಮ್ ಟ್ಯಾಗೋರ್, ಎನ್‌ಸಿಪಿಎಸ್‌ಪಿಯ ಸುಪ್ರಿಯಾ ಸುಳೆ, ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್, ಐಯುಎಂಎಲ್‌ನ ಇಟಿ ಮುಹಮ್ಮದ್ ಬಶೀರ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ವಿಸಿಕೆಯ ಥೋಲ್. ತಿರುಮಾವಲವನ್, ಮುಂತಾದವರು ಸೇರಿದ್ದಾರೆ.
ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿಸಲು ತಮಿಳುನಾಡು ಸರ್ಕಾರ ನಿಷೇಧ ಹೇರಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ತೀರ್ಪು ನೀಡುವ ವೇಳೆ ಜಸ್ಟೀಸ್ ಸ್ವಾಮಿನಾಥನ್, ಕಾರ್ತಿಕ ದೀಪ ಹಚ್ಚುವುದರಿಂದ ಹತ್ತಿರದ ದರ್ಗಾ ಅಥವಾ ಮುಸ್ಲಿಂ ಸಮುದಾಯದ ಹಕ್ಕು ಉಲ್ಲಂಘನೆ ಆಗೋದಿಲ್ಲ ಎಂದು ಹೇಳಿದ್ದರು. ಜೊತೆಗೆ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿ ತೀರ್ಪು ನೀಡಿದ್ದರು.
ಆದರೆ, ತಮಿಳುನಾಡು ಸರ್ಕಾರ ಇದರಿಂದ ಸಿಟ್ಟಾಗಿದ್ದು, ಜಸ್ಟೀಸ್ ಸ್ವಾಮಿನಾಥನ್ ಅವರನ್ನು ಪದಚ್ಯುತ ಮಾಡುವ ವಾಗ್ದಂಡನೆ ಪ್ರಕ್ರಿಯೆಗೆ ನಿರ್ಣಯ ಮಂಡಿಸಿದೆ. ಈ ತೀರ್ಪಿನ ನಂತರ, ಹಲವಾರು ವಕೀಲರು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರ.
ಯಾರಿವರು ಜಸ್ಟೀಸ್ ಜಿಆರ್ ಸ್ವಾಮಿನಾಥನ್
ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಹಾಲಿ ನ್ಯಾಯಾಧೀಶರಾಗಿದ್ದು, ಪ್ರಸ್ತುತ ಅದರ ಮಧುರೈ ಪೀಠದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯಮೂರ್ತಿ ಸಾಮಿನಾಥನ್ ತಮಿಳುನಾಡಿನ ತಿರುವರೂರಿನವರು. ಅವರು ಸೇಲಂನ ಸೆಂಟ್ರಲ್ ಲಾ ಕಾಲೇಜು ಮತ್ತು ಚೆನ್ನೈನ ಡಾ. ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ (ಬಿಎಲ್) ಪೂರ್ಣಗೊಳಿಸಿದ್ದಾರೆ.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಪ್ರತಿಭಾನ್ವಿತ ಮತ್ತು ನೇರ ನುಡಿಯ ನ್ಯಾಯಾಧೀಶರು ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಅವರು ಸಾಂವಿಧಾನಿಕ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು, ಜೈಲು ಹಕ್ಕುಗಳು, ಧಾರ್ಮಿಕ-ಆಚರಣೆ ವಿವಾದಗಳು ಮತ್ತು ಅಲ್ಪಸಂಖ್ಯಾತ/ಅಂತರ್ಲಿಂಗ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ತೀರ್ಪು ನೀಡಿದ್ದಾರೆ.
2024–25ರಲ್ಲಿ, ಅವರು ಏಳು ವರ್ಷಗಳಲ್ಲಿ ವಿಲೇವಾರಿ ಮಾಡಲಾದ ಸುಮಾರು 64,798 ಪ್ರಕರಣಗಳನ್ನು ಪಟ್ಟಿ ಮಾಡುವ “ಕಾರ್ಯಕ್ಷಮತೆಯ ವರದಿ”ಯನ್ನು ಬಿಡುಗಡೆ ಮಾಡಿದರು. ನ್ಯಾಯಾಧೀಶರು ತಮ್ಮ “ಸ್ಕೋರ್‌ಕಾರ್ಡ್” ಅನ್ನು ಸಾರ್ವಜನಿಕಗೊಳಿಸುವುದರ ಅಪರೂಪದ ಉದಾಹರಣೆಯಾಗಿದ್ದು, ನ್ಯಾಯಾಂಗ ಹೊಣೆಗಾರಿಕೆಯನ್ನು ಒತ್ತಿ ಹೇಳಿದ್ದರು.

