January21, 2026
Wednesday, January 21, 2026
spot_img

ಒಂದೇ ಒಂದು ಡ್ರೋನ್, ಪಾಕ್ ಸೇನೆ ಫಿನಿಶ್: ‘ಆಪರೇಷನ್ ಸಿಂದೂರ್’ ಅಬ್ಬರಕ್ಕೆ ನಡುಗಿದ್ದೇಕೆ ಶತ್ರು ರಾಷ್ಟ್ರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನೆಯ ಶೌರ್ಯ ಮತ್ತು ತಾಂತ್ರಿಕ ಸಾಮರ್ಥ್ಯಕ್ಕೆ ಪಾಕಿಸ್ತಾನ ಇದೀಗ ಅಧಿಕೃತವಾಗಿ ಸಾಕ್ಷಿ ನುಡಿದಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಅತ್ಯಂತ ರಹಸ್ಯ ಹಾಗೂ ವಿನಾಶಕಾರಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಶಸ್ಸನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಸಚಿವ ಇಶಾಕ್ ದಾರ್ ಅವರ ಪ್ರಕಾರ, ರಾವಲ್ಪಿಂಡಿಯ ಅತ್ಯಂತ ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗಿದ್ದ ನೂರ್ ಖಾನ್ ವಾಯುನೆಲೆ ಭಾರತದ ದಾಳಿಗೆ ತತ್ತರಿಸಿ ಹೋಗಿತ್ತು. ಕೇವಲ 36 ಗಂಟೆಗಳ ಅವಧಿಯಲ್ಲಿ ಭಾರತ ಸುಮಾರು 80 ಡ್ರೋನ್‌ಗಳನ್ನು ಉಡಾಯಿಸಿತ್ತು. ಪಾಕಿಸ್ತಾನವು 79 ಡ್ರೋನ್‌ಗಳನ್ನು ತಡೆಹಿಡಿಯುವಲ್ಲಿ ಯಶಸ್ವಿಯಾದೆವು ಎಂದು ಹೇಳಿಕೊಂಡರೂ, ಗುರಿ ಮುಟ್ಟಿದ ಕೇವಲ ಒಂದೇ ಒಂದು ಡ್ರೋನ್ ಇಡೀ ವಾಯುನೆಲೆಯನ್ನು ಅಸ್ತವ್ಯಸ್ತಗೊಳಿಸಿತ್ತು.

ಈ ದಾಳಿಯಿಂದಾಗಿ ವಾಯುನೆಲೆಯಲ್ಲಿದ್ದ ಪಾಕಿಸ್ತಾನದ ಕೆಲ ಪ್ರಮುಖ ಕಮಾಂಡರ್‌ಗಳು ಹಾಗೂ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಆಪರೇಷನ್ ಸಿಂಧೂರ ಕೇವಲ ನೂರ್ ಖಾನ್ ನೆಲೆಗೆ ಸೀಮಿತವಾಗಿರಲಿಲ್ಲ. ಬದಲಾಗಿ ಸರ್ಗೋಧಾ, ರಫೀಕಿ, ಜಾಕೋಬಾಬಾದ್ ಮತ್ತು ಮುರಿಡ್ಕೆ ಸೇರಿದಂತೆ ಒಟ್ಟು 11 ವಾಯುನೆಲೆಗಳನ್ನು ಭಾರತ ಅಕ್ಷರಶಃ ಉಡೀಸ್ ಮಾಡಿದೆ ಎಂಬ ಅಂಶ ಈಗ ಸಾಕ್ಷಿ ಸಮೇತ ಹೊರಬಿದ್ದಿದೆ.

ಮೇ 9ರಂದು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ರಕ್ಷಣಾ ತಂತ್ರಗಳನ್ನು ಹೆಣೆಯಲಾಗಿತ್ತು. ಆದರೆ, ಮರುದಿನ ಬೆಳಗ್ಗೆಯಷ್ಟರಲ್ಲಿ ಭಾರತ ನಡೆಸಿದ ಆಕಸ್ಮಿಕ ದಾಳಿಯು ಪಾಕಿಸ್ತಾನದ ಊಹೆಗೂ ಮೀರಿತ್ತು. ಈ ಕಾರ್ಯಾಚರಣೆಯು ಗಡಿ ದಾಟದೆಯೇ ವೈರಿಗಳನ್ನು ಹೇಗೆ ಮಟ್ಟಹಾಕಬಹುದು ಎಂಬುದಕ್ಕೆ ಭಾರತ ತೋರಿದ ಅತ್ಯುತ್ತಮ ಉದಾಹರಣೆಯಾಗಿದೆ.

Must Read