ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡುತ್ತಿದ್ದು, ಅವರ ಈ ಭೇಟಿ ಕೇವಲ ಕ್ಷಣಿಕವಾಗಿರಲಿದೆ. ತಮಿಳುನಾಡಿನಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಅವರು, ಮೈಸೂರು ವಿಮಾನ ನಿಲ್ದಾಣವನ್ನು ಕೇವಲ ಒಂದು ಸಂಪರ್ಕ ಕೊಂಡಿಯಾಗಿ ಬಳಸಿಕೊಳ್ಳಲಿದ್ದಾರೆ.
ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ 2:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಕೇವಲ 15 ನಿಮಿಷಗಳಲ್ಲಿ, ಅಂದರೆ 2:35ಕ್ಕೆ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲೂರು ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಮರಳಿ ಸಂಜೆ 5:45ಕ್ಕೆ ಮೈಸೂರಿಗೆ ಬರಲಿರುವ ಅವರು, ಸಂಜೆ 6 ಗಂಟೆಗೆ ದೆಹಲಿಗೆ ವಿಮಾನದ ಮೂಲಕ ನಿರ್ಗಮಿಸಲಿದ್ದಾರೆ.
ರಾಹುಲ್ ಗಾಂಧಿ ಅವರ ಬಳಿ ಸಮಯದ ಅಭಾವವಿರುವುದರಿಂದ, ಅವರನ್ನು ಸ್ವಾಗತಿಸಲು ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಚರ್ಚೆಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಕೇವಲ 15 ನಿಮಿಷಗಳ ಅವಧಿಯಲ್ಲಿ ಉಭಯ ಕುಶಲೋಪರಿ ಹಾಗೂ ಸೌಜನ್ಯದ ಭೇಟಿಗಷ್ಟೇ ಈ ಸಮಯ ಸೀಮಿತವಾಗುವ ಸಾಧ್ಯತೆಯಿದೆ. ರಾಜ್ಯ ರಾಜಕಾರಣದ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲು ಈ ಭೇಟಿಯಲ್ಲಿ ಅವಕಾಶ ಸಿಗುವುದು ಕಷ್ಟ ಎನ್ನಲಾಗುತ್ತಿದೆ.


