Saturday, October 25, 2025

ಬಿಹಾರ ಅಖಾಡದಲ್ಲಿ ‘ಕಮಲ’ ಕಲಿ: ಮೋದಿ-BSY ಮಹತ್ವದ ಭೇಟಿ, NDA ಗೆಲುವಿಗೆ ರಣತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾದ ಬಿ.ಎಸ್​. ಯಡಿಯೂರಪ್ಪ ಅವರು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

ಈ ಭೇಟಿಯ ಜೊತೆಗೆ, ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ಪಕ್ಷದ ಮಹತ್ವದ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸಭೆಯಲ್ಲಿ ಯಡಿಯೂರಪ್ಪ ಅವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಪಕ್ಷದ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

NDAಯ ಸೀಟು ಹಂಚಿಕೆ ಫೈನಲ್, ಅಭ್ಯರ್ಥಿಗಳ ಆಯ್ಕೆ ಚರ್ಚೆ

ಬಿಹಾರ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲು NDA ಪಣ ತೊಟ್ಟಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಮತ್ತು ಚುನಾವಣಾ ಕಾರ್ಯತಂತ್ರಗಳ ಕುರಿತು ಸವಿವರವಾಗಿ ಚರ್ಚಿಸಲಾಗಿದೆ.

ಆಡಳಿತಾರೂಢ NDA ಒಕ್ಕೂಟವು ನಿನ್ನೆಯಷ್ಟೇ ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆಯನ್ನು ಘೋಷಿಸಿದೆ. ಪಕ್ಷಗಳ ನಡುವಿನ ಒಮ್ಮತದ ನಿರ್ಧಾರದಂತೆ, ಮುಖ್ಯ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ಉಳಿದಂತೆ ಲೋಕ ಜನಶಕ್ತಿ ಪಕ್ಷಕ್ಕೆ 29 ಸ್ಥಾನ, ರಾಷ್ಟ್ರೀಯ ಲೋಕ್ ಮೋರ್ಚಾ ಮತ್ತು ಹಿಂದೂಸ್ತಾನಿ ಆವಂ ಮೋರ್ಚಾಗೆ ತಲಾ 6 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.

ಬಿಹಾರದಲ್ಲಿ NDA ಮೈತ್ರಿಕೂಟವು ತನ್ನ ಪ್ರಮುಖ ರಾಜಕೀಯ ವಿರೋಧಿಗಳಾದ ಮಹಾಘಟಬಂದನ್ ಜೊತೆ ಗೆಲುವಿಗಾಗಿ ಸೆಣೆಸಾಡಬೇಕಿದ್ದು, ಈ ಬಗ್ಗೆ ಮಹತ್ವದ ಸಭೆಯಲ್ಲಿ ಚರ್ಚೆ ನಡೆದಿದೆ. ತೇಜಸ್ವಿ ಯಾದವ್​ ನೇತೃತ್ವದ ಆರ್‌ಜೆಡಿ, ಕಾಂಗ್ರೆಸ್​, ಸಿಪಿಐ(ಎಂಎಲ್‌), ಸಿಪಿಐ, ಸಿಪಿಐ(ಎಂ) ಮತ್ತು ವಿಐಪಿ ಒಳಗೊಂಡಿರುವ ಮೈತ್ರಿಪಡೆ ಎದುರಾಳಿಯಾಗಿ ಸವಾಲು ಒಡ್ಡಿದೆ.

ಮಹಾಘಟಬಂದನ್​ನ ಸೀಟು ಹಂಚಿಕೆ ಇನ್ನೂ ಅಂತಿಮವಾಗಬೇಕಿದ್ದು, ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಈ ಬಗ್ಗೆ ಅಂತಿಮ ಹಂತದ ಮಾತುಕತೆಗಳು ನಡೆಯುತ್ತಿವೆ. ಬಿಹಾರ ಚುನಾವಣೆ ಎರಡು ಹಂತಗಳಲ್ಲಿ ಘೋಷಣೆಯಾಗಿದ್ದು, ನವೆಂಬರ್​ 6 ಮತ್ತು 11 ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶವು ನವೆಂಬರ್​ 14ರಂದು ಹೊರಬೀಳಲಿದೆ.

error: Content is protected !!