Saturday, November 1, 2025

ಕನ್ನಡ ರಾಜ್ಯೋತ್ಸವ ಆಚರಣೆ: ನಾಡಜನತೆಗೆ ಶುಭಕೋರಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಾದ್ಯಂತ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಗಣ್ಯಾತಿ ಗಣ್ಯರು ನಾಡಿನ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ “ಮಾನವ ಕುಲ ತಾನೊಂದೇ ವಲಂ” ಎಂದು ಹೇಳಿದ್ದು ಎಂದು ಹೇಳಿದ್ದಾರೆ.

ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.

ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ. ಕನ್ನಡವನ್ನು ಬಳಸೋಣ, ಬೆಳೆಸೋಣ ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪೋಸ್ಟ್ ಮಾಡಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳು ಎಂದು ಹೇಳಿದ್ದಾರೆ.

ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ನಿತ್ಯ ಬಳಸಿ, ಅದನ್ನು ಇನ್ನಷ್ಟು ಉತ್ತುಂಗಕ್ಕೇರಿಸುವ ಕಾರ್ಯ ನಮ್ಮೆಲ್ಲರ ಪರಮ ಕರ್ತವ್ಯ. ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ ಎಂದು ತಿಳಿಸಿದ್ದಾರೆ.

error: Content is protected !!