ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಅವರಿಗೆ ನೆಲ, ಜಲ ಮತ್ತು ಭಾಷೆಯ ಮೇಲೆ ಇರುವ ಪ್ರೀತಿ ಜಗಜ್ಜಾಹೀರು. ಕನ್ನಡವನ್ನು ಯಾರಾದರೂ ಅಸ್ಪಷ್ಟವಾಗಿ ಉಚ್ಚರಿಸಿದರೂ ತಿದ್ದುವ ಸುದೀಪ್, ಈಗ ಕನ್ನಡದ ಬಾವುಟಕ್ಕೆ ಅವಮಾನ ಮಾಡಿದವರಿಗೆ ತಕ್ಕ ಭಾಷೆಯಲ್ಲೇ ಉತ್ತರ ನೀಡಿದ್ದಾರೆ.
ಇತ್ತೀಚೆಗಷ್ಟೇ ಶಬರಿಮಲೆಗೆ ತೆರಳುವ ಮಾರ್ಗ ಮಧ್ಯೆ ತಮಿಳುನಾಡಿನ ಈರೋಡ್ ಬಳಿ ಕನ್ನಡಿಗ ಮಾಲಾಧಾರಿಗಳಿಗೆ ಕಿರುಕುಳ ನೀಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿದ್ದ ವಾಹನಗಳನ್ನು ತಡೆದು, ಬಲವಂತವಾಗಿ ಬಾವುಟಗಳನ್ನು ತೆರವುಗೊಳಿಸಲಾಗಿತ್ತು. ಈ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಘಟನೆ ಮಾಸುವ ಮುನ್ನವೇ ಸುದೀಪ್ ಅವರು ತಮಿಳುನಾಡಿನ ನೆಲದಲ್ಲೇ ಕನ್ನಡದ ಬಾವುಟವನ್ನು ಎತ್ತಿ ಹಿಡಿದಿದ್ದಾರೆ. ಜನವರಿ 25ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ‘ಕರ್ನಾಟಕ ಬುಲ್ಡೋಜರ್ಸ್’ ಮತ್ತು ‘ಭೋಜ್ಪುರಿ ದಬಾಂಗ್ಸ್’ ನಡುವಿನ ಸಿಸಿಎಲ್ (CCL) ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಗೆಲುವು ಸಾಧಿಸಿತು. ಈ ಜಯದ ಸಂಭ್ರಮದ ನಡುವೆಯೇ ಸುದೀಪ್ ಅವರು ಮೈದಾನದಲ್ಲಿ ಹೆಮ್ಮೆಯಿಂದ ಕನ್ನಡದ ಬಾವುಟವನ್ನು ಹಾರಿಸುವ ಮೂಲಕ, ಅಸ್ಮಿತೆಯ ವಿಚಾರದಲ್ಲಿ ತಾವು ಎಂದಿಗೂ ಹಿಂದೆ ಬೀಳುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 202 ರನ್ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಭೋಜ್ಪುರಿ ದಬಾಂಗ್ಸ್ ತಂಡ ಆರಂಭದಲ್ಲಿ ಅಬ್ಬರಿಸಿದರೂ, ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿ 184 ರನ್ಗಳಿಗೆ ಆಲೌಟ್ ಆಯಿತು. ಸತತ ಮೂರನೇ ಗೆಲುವು ದಾಖಲಿಸಿದ ಕಿಚ್ಚನ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಬಾವುಟಕ್ಕೆ ಅವಮಾನವಾದ ಕೆಲವೇ ದಿನಗಳಲ್ಲಿ, ಅದೇ ರಾಜ್ಯದ ಮತ್ತೊಂದು ಮೈದಾನದಲ್ಲಿ ಕನ್ನಡದ ಬಾವುಟ ರಾರಾಜಿಸುವಂತೆ ಮಾಡಿದ ಸುದೀಪ್ ಅವರ ನಡೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.




