ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆನಿಸ್ ಲೋಕದಲ್ಲಿ ಮಿಂಚಿದ್ದ ಕನ್ನಡಿಗ ರೋಹನ್ ಬೋಪಣ್ಣ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಪ್ಯಾರಿಸ್ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದ ಬೋಪಣ್ಣ, ಇದೀಗ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ.
ರೋಹನ್ ಬೋಪಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
‘ನಿಮ್ಮ ಜೀವನಕ್ಕೆ ಅರ್ಥ ನೀಡಿದ ವಿಷಯಕ್ಕೆ ನೀವು ಹೇಗೆ ವಿದಾಯ ಹೇಳುತ್ತೀರಿ? 20 ಮರೆಯಲಾಗದ ವರ್ಷಗಳ ಪ್ರವಾಸದ ನಂತರ, ಈಗ ಸಮಯ ಬಂದಿದೆ. ನಾನು ಅಧಿಕೃತವಾಗಿ ನನ್ನ ಟೆನಿಸ್ ರಾಕೆಟ್ ಅನ್ನು ನೇತುಹಾಕುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಪ್ರತಿ ಬಾರಿ ಕೋರ್ಟ್‌ಗೆ ಕಾಲಿಟ್ಟಾಗಲೂ ಆ ಧ್ವಜಕ್ಕಾಗಿ, ಆ ಭಾವನೆಗಾಗಿ ಮತ್ತು ಆ ಹೆಮ್ಮೆಗಾಗಿ ಆಡಿದ್ದೇನೆ. ಟೆನಿಸ್ ನನಗೆ ಕೇವಲ ಕ್ರೀಡೆಗಿಂತ ಹೆಚ್ಚಿನದಾಗಿದೆ. ನಾನು ಸೋತಾಗ ಅದು ನನಗೆ ಉದ್ದೇಶವನ್ನು ಹಾಗೂ ಶಕ್ತಿ ನೀಡಿತು ಮತ್ತು ಜಗತ್ತು ನನ್ನನ್ನು ಅನುಮಾನಿಸಿದಾಗ ಆತ್ಮವಿಶ್ವಾಸವನ್ನು ನೀಡಿತು. ಪ್ರತಿ ಬಾರಿ ನಾನು ಕೋರ್ಟ್‌ಗೆ ಕಾಲಿಟ್ಟಾಗ ಪರಿಶ್ರಮ, ಮತ್ತೆ ಮೇಲೇರಲು ಸ್ಥಿತಿಸ್ಥಾಪಕತ್ವ ಮತ್ತು ಮತ್ತೆ ಹೋರಾಡಲು ಧೈರ್ಯವನ್ನು ಕಲಿಸಿತು’ ಎಂದಿದ್ದಾರೆ.
45 ವರ್ಷದ ಬೋಪಣ್ಣ ತಮ್ಮ ವೃತ್ತಿಜೀವನವನ್ನು ಎರಡು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳೊಂದಿಗೆ ಕೊನೆಗೊಳಿಸಿದ್ದಾರೆ. 2024 ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ (ಮ್ಯಾಥ್ಯೂ ಎಬ್ಡೆನ್ ಜೊತೆ) ಮತ್ತು 2017 ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ (ಗೇಬ್ರಿಯೆಲಾ ಡಬ್ರೋವ್ಸ್ಕಿ ಜೊತೆ) ಗೆಲ್ಲುವ ಮೂಲಕ ತಮ್ಮ ವರ್ಣರಂಜಿತ ವೃತ್ತಿಜೀವನಕ್ಕೆ ಫುಲ್ಸ್ಟಾಪ್ ಇಟ್ಟಿದ್ದಾರೆ. ಇದನ್ನು ಹೊರತುಪಡಿಸಿ ತಮ್ಮ ವೃತ್ತಿಜೀವನಕದಲ್ಲಿ ಬೋಪಣ್ಣ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ್ದಾರೆ.
2020 ರ ಯುಎಸ್ ಓಪನ್‌ನಲ್ಲಿ ಐಸಾಮ್-ಉಲ್-ಹಕ್ ಖುರೇಷಿ ಜೊತೆ ಮತ್ತು 2023 ರ ಯುಎಸ್ ಓಪನ್‌ನಲ್ಲಿ ಎಬ್ಡೆನ್ ಜೊತೆ ಎರಡು ಬಾರಿ ಪುರುಷರ ಡಬಲ್ಸ್‌ನ ಫೈನಲ್ ಆಡಿರುವ ಬೋಪಣ್ಣ, ಎರಡು ಮಿಶ್ರ ಡಬಲ್ಸ್ ಫೈನಲ್‌ಗಳನ್ನು ಸಹ ಆಡಿದ್ದಾರೆ. 2018 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಟೈಮಾ ಬಾಬೋಸ್ ಜೊತೆ ಮತ್ತು 2023 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ ಬೋಪಣ್ಣ ಮಿಶ್ರ ಡಬಲ್ಸ್ ಫೈನಲ್ ಆಡಿದ್ದರು. ಇದಲ್ಲದೆ ರೋಹನ್ ಬೋಪಣ್ಣ 2012 ಮತ್ತು 2015 ರಲ್ಲಿ ಮಹೇಶ್ ಭೂಪತಿ ಮತ್ತು ಫ್ಲೋರಿನ್ ಮೆರ್ಗೆಯಾ ಅವರೊಂದಿಗೆ ಎಟಿಪಿ ಫೈನಲ್ಸ್‌ನ ಫೈನಲ್ ಕೂಡ ಆಡಿದ್ದರು.

