ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೊಂಡು ಎರಡು ವಾರಗಳಾದರೂ ಅದರ ಬಾಕ್ಸ್ ಆಫೀಸ್ ಕಲೆಕ್ಷನ್ ಅಬ್ಬರ ಕಡಿಮೆಯಾಗಿಲ್ಲ. ಈ ಸಿನಿಮಾ ದೇಶವ್ಯಾಪಿಯಾಗಿ ಸುಮಾರು 400 ಕೋಟಿ ರೂಪಾಯಿ ಕಲೆಕ್ಷನ್ ದಾಖಲಿಸಿದ್ದು, ಮುಂದಿನ ದಿನಗಳಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇನ್ನಷ್ಟು ಗಳಿಕೆ ಮಾಡುವ ನಿರೀಕ್ಷೆಯಿದೆ.
ಅಕ್ಟೋಬರ್ 11ರಂದು (ಚಿತ್ರದ 10ನೇ ದಿನ) ‘ಕಾಂತಾರ: ಚಾಪ್ಟರ್ 1’ ಬರೋಬ್ಬರಿ 37 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ಶನಿವಾರ 55 ಕೋಟಿ ರೂಪಾಯಿ ಗಳಿಕೆ ಮಾಡಿದ ಚಿತ್ರ, ಎರಡನೇ ಶನಿವಾರವೂ ಅದೇ ರೀತಿ ಪ್ರಭಾವ ಮುಂದುವರಿಸಿದೆ. ಸಾಮಾನ್ಯವಾಗಿ ಬಹುತೇಕ ಸಿನಿಮಾಗಳು ಮೊದಲ ವಾರದ ನಂತರ ಕುಸಿತ ಕಾಣುತ್ತವೆ. ಆದರೆ ಈ ಚಿತ್ರ ಎರಡನೇ ವಾರದಲ್ಲಿಯೂ ಬಲವಾದ ಹಿಡಿತ ಸಾಧಿಸಿದೆ.
ಚಿತ್ರದ ಒಟ್ಟಾರೆ ಗಳಿಕೆ ಈಗಾಗಲೇ 396 ಕೋಟಿ ರೂಪಾಯಿಗೆ ತಲುಪಿದೆ. ಕನ್ನಡ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಭಾಷಾವಾರು ಲೆಕ್ಕಾಚಾರ ಪ್ರಕಾರ ಕನ್ನಡದಲ್ಲಿ 114 ಕೋಟಿ, ಹಿಂದಿಯಲ್ಲಿ 116 ಕೋಟಿ, ತೆಲುಗಿನಲ್ಲಿ 67 ಕೋಟಿ, ತಮಿಳಿನಲ್ಲಿ 34 ಕೋಟಿ ಹಾಗೂ ಮಲಯಾಳಂನಲ್ಲಿ 28 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ.
ದೇಶದ ಒಳಗಷ್ಟೇ ಅಲ್ಲದೆ ವಿದೇಶದಲ್ಲಿಯೂ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಬ್ಬದ ದಿನಗಳಲ್ಲಿ ಚಿತ್ರ ವಿದೇಶ ಮಾರುಕಟ್ಟೆಯಿಂದ 200 ಕೋಟಿ ರೂಪಾಯಿ ಗಳಿಸಿದರೆ ಒಟ್ಟಾರೆ ಕಲೆಕ್ಷನ್ 1000 ಕೋಟಿಗೂ ಮೀರುತ್ತದೆ ಎನ್ನುವ ನಿರೀಕ್ಷೆ ಮೂಡಿದೆ.