ಹೊಸದಿಗಂತ ಡಿಜಿಟಲ್ ಡೆಸ್ಕ್:
ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ಶಾ ಅವರನ್ನು ಭೇಟಿ ಮಾಡಿ ಲೋಕಸಭಾ ಕ್ಷೇತ್ರ ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸಂದರ್ಭದಲ್ಲಿ ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚರ್ಚಿಸಲಾಯಿತು. ಈ ಮಹತ್ವದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಯಿತು. ಈ ಯೋಜನೆ ಜಾರಿಯಾದಲ್ಲಿ ಚಿತ್ರದುರ್ಗ ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ರೈತರಿಗೆ ಮಹತ್ತರ ಪ್ರಯೋಜನವಾಗಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಹೆಚ್ಚುವರಿ ಏಕಲವ್ಯ ಮಾದರಿ ವಸತಿ ಶಾಲೆ ಸ್ಥಾಪಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ವಿನಂತಿಸಲಾಯಿತು. ಚಿತ್ರದುರ್ಗದ ಇತಿಹಾಸ ಪ್ರಸಿದ್ಧ ವೀರನಾದ ಮದಕರಿ ನಾಯಕ ಅವರ ಸ್ಮರಣಾರ್ಥ ಚಿತ್ರದುರ್ಗದಲ್ಲಿ ‘ಮದಕರಿ ನಾಯಕ ಥೀಮ್ ಪಾರ್ಕ್’ ಸ್ಥಾಪನೆ ಮಾಡುವ ಕುರಿತು ಮನವಿ ಮಾಡಲಾಯಿತು. ಈ ಯೋಜನೆ ಜಾರಿಯಾದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ.
ಇದರ ಜೊತೆಗೆ ನನ್ನ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ವಿವರವಾಗಿ ಚರ್ಚೆ ನಡೆಸಲಾಯಿತು. ನನ್ನ ಮನವಿಗಳನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್‌ಶಾ ಅವರು ಸಕಾರಾತ್ಮಕವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.



