ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ‘ಬೆಂಗಳೂರು ನಡಿಗೆ’ಯ ಭಾಗವಾಗಿ ಇಂದು ಜೆಪಿ ಪಾರ್ಕ್‌ಗೆ ಆಗಮಿಸಿದ ಸಂದರ್ಭದಲ್ಲಿ ದೊಡ್ಡ ರಾಜಕೀಯ ರಂಗಮಂದಿರವೇ ನಡೆಯಿತು. ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ವೇದಿಕೆಯಲ್ಲಿ ಡಿಕೆಶಿ ಹಾಗೂ ಸರ್ಕಾರದ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದರು.
ಘಟನೆ ನಡೆದಿದ್ದು ಹೀಗೆ: ಡಿಕೆಶಿ ಅವರು ಪಾರ್ಕ್‌ನಲ್ಲಿ ವಾಕ್ ಮಾಡುತ್ತಾ ಆಗಮಿಸಿದರು. ಆಗ ಆರ್‌ಎಸ್‌ಎಸ್ ಪಥಸಂಚಲನ ಮುಗಿಸಿದ್ದ ಶಾಸಕ ಮುನಿರತ್ನ ಅವರು ಆರ್‌ಎಸ್‌ಎಸ್ ಸಮವಸ್ತ್ರದಲ್ಲೇ ಜನರ ಮಧ್ಯೆ ಕುಳಿತಿದ್ದರು. ಮುನಿರತ್ನರನ್ನು ನೋಡಿದ ಡಿಕೆಶಿ ಅವರು ತಮಾಷೆಯ ಧ್ವನಿಯಲ್ಲಿ, “ಕರಿ ಟೋಪಿ ಎಂಎಲ್ಎ ಬಾರಪ್ಪ” ಎಂದು ವೇದಿಕೆಗೆ ಆಹ್ವಾನಿಸಿದರು.
ಡಿಕೆಶಿ ಆಹ್ವಾನದ ಮೇರೆಗೆ ವೇದಿಕೆ ಏರಿದ ಮುನಿರತ್ನ, ಮೈಕ್ ಕೇಳಿದರು. ಆದರೆ ಡಿಕೆಶಿ ಮೈಕ್ ಕೊಡಲು ಹಿಂಜರಿದರು. ಕೊನೆಗೆ ಮೈಕ್ ಪಡೆದ ಮುನಿರತ್ನ, “ನಾನು ಆರ್‌ಎಸ್‌ಎಸ್ ಪಥಸಂಚಲನ ಮುಗಿಸಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನನಗೆ ಈ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ. ಆದರೆ ಇದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರಣ ನಾನೊಬ್ಬ ಪ್ರಜೆಯಾಗಿ ಭಾಗವಹಿಸಿದ್ದೇನೆ,” ಎಂದು ಹೇಳಿ ಮೈಕ್ ಕೊಟ್ಟು ವೇದಿಕೆಯಿಂದ ಇಳಿದು ಪುನಃ ಜನರ ಮಧ್ಯೆ ಕುಳಿತರು.
ಇದಾದ ನಂತರ ಸಭಾ ಕಾರ್ಯಕ್ರಮ ಆರಂಭವಾದಾಗ, ನಿರೂಪಕರು ಮುನಿರತ್ನ ಅವರನ್ನು ಸ್ವಾಗತಿಸಿ ಮತ್ತೆ ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ವೇದಿಕೆ ಏರಿದ ಮುನಿರತ್ನ ತಮ್ಮ ಆಕ್ರೋಶವನ್ನು ಹೊರಹಾಕಿದರು: “ನಾನೊಬ್ಬ ಜನಪ್ರತಿನಿಧಿಯಾಗಿದ್ದರೂ ನನಗೆ ಈ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಕೊಟ್ಟಿಲ್ಲ. ಈ ಕ್ಷೇತ್ರದ ಸಂಸದರಿಗೂ ಕರೆದಿಲ್ಲ. ಹಾಗಾದರೆ, ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೋ?” ಎಂದು ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು.
ಮುನಿರತ್ನ ಅವರ ಈ ಬಹಿರಂಗ ಅಸಮಾಧಾನ ಸ್ಫೋಟಗೊಳ್ಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಅವರನ್ನು ಸುತ್ತುವರೆದು ಅವರ ಕೈಯಿಂದ ಮೈಕ್ ಅನ್ನು ಪಡೆದುಕೊಂಡರು. ಇದರಿಂದಾಗಿ ಕಾರ್ಯಕ್ರಮದಲ್ಲಿ ಕೆಲಕಾಲ ಭಾರೀ ಗೊಂದಲದ ವಾತಾವರಣ ಉಂಟಾಯಿತು.