March 22, 2026
Sunday, March 22, 2026
spot_img

‘ಕಲ್ಕಿ-2’ ಸೆಟ್‌ನಲ್ಲಿ ‘ಕರ್ಣ’ನ ಅಬ್ಬರ: ಪ್ರಭಾಸ್ ಜೊತೆ ದುಲ್ಕರ್ ಸಲ್ಮಾನ್-ಜೆಡಿ ಚಕ್ರವರ್ತಿ ಜುಗಲ್‌ಬಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೌರಾಣಿಕ ಕಥೆ ಮತ್ತು ಫ್ಯೂಚರಿಸ್ಟಿಕ್ ಫ್ಯಾಂಟಸಿಯ ಅದ್ಭುತ ಸಮ್ಮಿಲನವಾಗಿದ್ದ ‘ಕಲ್ಕಿ 2898 AD’ ಮೊದಲ ಭಾಗದ ಭಾರಿ ಯಶಸ್ಸಿನ ನಂತರ, ಈಗ ಎರಡನೇ ಭಾಗದ ಚಿತ್ರೀಕರಣದ ಅಪ್‌ಡೇಟ್‌ಗಳು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿವೆ.

ರೆಬೆಲ್ ಸ್ಟಾರ್ ಪ್ರಭಾಸ್ ಇದೀಗ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಭಾಗದಲ್ಲಿ ‘ಭೈರವ’ನಾಗಿ ಮಿಂಚಿದ್ದ ಅವರು, ಎರಡನೇ ಭಾಗದಲ್ಲಿ ಅಪ್ರತಿಮ ವೀರ ‘ಕರ್ಣ’ನಾಗಿ ಹೆಚ್ಚು ಪವರ್‌ಫುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಅವರೊಂದಿಗೆ ನಟ ದುಲ್ಕರ್ ಸಲ್ಮಾನ್ ಮತ್ತು ವಿಲನ್ ಪಾತ್ರದಲ್ಲಿ ಜೆಡಿ ಚಕ್ರವರ್ತಿ ಸಹ ಈ ಹಂತದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ಈ ಸೀಕ್ವೆಲ್‌ನ ಮತ್ತೊಂದು ದೊಡ್ಡ ಹೈಲೈಟ್ ಎಂದರೆ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸುಮಾರು 40 ವರ್ಷಗಳ ಬಳಿಕ ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು. 1985ರಲ್ಲಿ ‘ಗಿರಫ್ತಾರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಇವರು, ಈಗ ‘ಕಲ್ಕಿ’ ಲೋಕದಲ್ಲಿ ಮುಖಾಮುಖಿಯಾಗಲಿದ್ದಾರೆ. ಅಮಿತಾಬ್ ಈಗಾಗಲೇ ತಮ್ಮ ಪಾಲಿನ ಚಿತ್ರೀಕರಣ ಮುಗಿಸಿ ಮುಂಬೈಗೆ ಮರಳಿದ್ದು, ಕಮಲ್ ಹಾಸನ್ ಸಹ ಪ್ರಮುಖ ಭಾಗಗಳ ಶೂಟಿಂಗ್ ಪೂರೈಸಿದ್ದಾರೆ ಎನ್ನಲಾಗಿದೆ.

ಮೊದಲ ಭಾಗದಲ್ಲಿ ನಾಯಕಿಯಾಗಿದ್ದ ದೀಪಿಕಾ ಪಡುಕೋಣೆ ಅವರ ಸ್ಥಾನಕ್ಕೆ ಸೌತ್ ಇಂಡಿಯನ್ ಸ್ಟಾರ್ ಸಾಯಿ ಪಲ್ಲವಿ ಬರಲಿದ್ದಾರೆ ಎಂಬ ಗುಸುಗುಸು ಗಾಂಧಿನಗರದಿಂದ ಫಿಲ್ಮ್ ಸಿಟಿಯವರೆಗೆ ಕೇಳಿಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮುದ್ರೆ ಬಿದ್ದಿಲ್ಲ.

ಸದ್ಯಕ್ಕೆ ಪ್ರಭಾಸ್ ಅವರು ‘ಸ್ಪಿರಿಟ್’ ಚಿತ್ರದ ಕೆಲಸಗಳಿಂದ ಬಿಡುವು ಪಡೆದು ಕಲ್ಕಿ ಲೋಕಕ್ಕೆ ಮರಳಿದ್ದು, ಪುರಾಣ ಮತ್ತು ಭವಿಷ್ಯದ ಕಥೆ ಎರಡನೇ ಭಾಗದಲ್ಲಿ ಯಾವ ಅದ್ಭುತವನ್ನು ಸೃಷ್ಟಿಸಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !