Monday, November 10, 2025

ಮತಗಳ್ಳತನದ ಹೋರಾಟಕ್ಕೆ ಕರ್ನಾಟಕವೇ ಮೂಲ: ಡಿಸಿಎಂ ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮೊದಲು ಪತ್ತೆಯಾಗಿದ್ದ ಮತಗಳ್ಳತನದ ಅಕ್ರಮಗಳು ಇದೀಗ ಮಹಾರಾಷ್ಟ್ರ, ಹರಿಯಾಣ ಹಾಗೂ ಬಿಹಾರದಂತಹ ರಾಜ್ಯಗಳಲ್ಲೂ ಬೆಳಕಿಗೆ ಬಂದಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಹೊಸ ಕಟ್ಟಡ ‘ಇಂದಿರಾ ಭವನ’ದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಂಕೇತಿಕವಾಗಿ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಹಸ್ತಾಂತರಿಸಿದ್ದಾಗಿ ಹೇಳಿದರು.

ಖರ್ಗೆ ಮಾರ್ಗದರ್ಶನದಲ್ಲಿ ಹೋರಾಟ:

“100 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರು ನಿಭಾಯಿಸಿದ್ದ ಜವಾಬ್ದಾರಿಯನ್ನು ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಮುನ್ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ‘ಒಬ್ಬರಿಗೆ ಒಂದು ಮತ’ ಎಂಬ ಹಕ್ಕಿನ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ,” ಎಂದು ಡಿಕೆಶಿ ವಿವರಿಸಿದರು.

ಕರ್ನಾಟಕದಿಂದಲೇ ಅಕ್ರಮ ಬಯಲು:

ಮತಗಳ್ಳತನವನ್ನು ಮೊದಲು ಪತ್ತೆಹಚ್ಚಿದ್ದೇ ಕರ್ನಾಟಕದಲ್ಲಿ. ಎಐಸಿಸಿ ಸಂಶೋಧನಾ ವಿಭಾಗ, ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ್ತು ಕೆಪಿಸಿಸಿ ತಂಡವು ಈ ಅಕ್ರಮಗಳನ್ನು ಪತ್ತೆಹಚ್ಚಿ ಎಐಸಿಸಿಗೆ ಮಾಹಿತಿ ನೀಡಿದವು ಎಂದು ಅವರು ಮಾಹಿತಿ ಹಂಚಿಕೊಂಡರು.

ರಾಜ್ಯಗಳಿಂದ ರಾಜ್ಯಗಳಿಗೆ ಹಬ್ಬಿದ ಅಭಿಯಾನ:

ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಈ ಹೋರಾಟಕ್ಕೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ, ಹರಿಯಾಣ ಮತ್ತು ನಂತರ ಬಿಹಾರದವರೆಗೂ ಚುನಾವಣಾ ಅಕ್ರಮಗಳು ಬಹಿರಂಗಗೊಂಡವು. ಕೆ.ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ ಅವರ ನಿರ್ದೇಶನದ ಮೇರೆಗೆ ಸಹಿ ಸಂಗ್ರಹ ಅಭಿಯಾನ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ಮುಂದುವರಿಯಲಿದೆ ಹೋರಾಟ:

ಪಕ್ಷದ ಕಾರ್ಯಕರ್ತರು, ಬ್ಲಾಕ್, ಜಿಲ್ಲಾಧ್ಯಕ್ಷರು ಮತ್ತು ವಿವಿಧ ಘಟಕಗಳ ಪರಿಶ್ರಮದಿಂದ ಸಂಗ್ರಹಿಸಲಾದ ಸಹಿಗಳನ್ನು ಸಲ್ಲಿಕೆ ಮಾಡಲಾಗಿದೆ. “ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ನಮ್ಮ ಕಾರ್ಯಕರ್ತರು ಈ ಅಭಿಯಾನವನ್ನು ಇನ್ನೂ ಮುಂದುವರಿಸುತ್ತಿದ್ದು, ನಂತರ ಸಂಗ್ರಹವಾಗುವ ಸಹಿ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಸಲ್ಲಿಕೆ ಮಾಡುತ್ತೇವೆ,” ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ಮತಗಳ್ಳತನ ಖಂಡಿತವಾಗಿ ನಡೆದಿದೆ ಎಂದು ಪುನರುಚ್ಚರಿಸಿದ ಅವರು, “ಬಿಹಾರದಲ್ಲಿ ಎಸ್‌ಐಆರ್ ನಡೆದಾಗ ನ್ಯಾಯಾಲಯ ಏಕೆ ಮಧ್ಯಪ್ರವೇಶಿಸಿ ಸೂಚನೆ ನೀಡಿತು? ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮಗಳು ಬೆಂಗಳೂರಿಗೆ ಬಂದು ಫ್ಯಾಕ್ಟ್ ಚೆಕ್ ಮಾಡಿದಾಗ ಅಕ್ರಮಗಳು ದೃಢಪಟ್ಟಿವೆ,” ಎಂದರು. ಕೊನೆಯಲ್ಲಿ, ಯಾವ ಸರ್ಕಾರವೂ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳುವುದಿಲ್ಲ, ವಿರೋಧ ಪಕ್ಷದ ಕೆಲಸವೇ ವೈಫಲ್ಯಗಳನ್ನು ಕಂಡುಹಿಡಿದು ಜನರಿಗೆ ತಿಳಿಸುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

error: Content is protected !!