ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜಕಾರಣದ ‘ಟಗರು’ ಎಂದೇ ಖ್ಯಾತರಾಗಿರುವ ಸಿದ್ದರಾಮಯ್ಯ ಅವರು ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ನಿರ್ಮಿಸಿದ್ದ 7 ವರ್ಷ 239 ದಿನಗಳ ಆಡಳಿತದ ಸುದೀರ್ಘ ದಾಖಲೆಯನ್ನು ಸಿದ್ದರಾಮಯ್ಯ ಇಂದು ಸರಿಗಟ್ಟಿದ್ದಾರೆ. ನಾಳೆ (ಮಂಗಳವಾರ) ಸಿದ್ದರಾಮಯ್ಯ ಅವರು ಅರಸು ಅವರ ಈ ಐತಿಹಾಸಿಕ ದಾಖಲೆಯನ್ನು ಅಧಿಕೃತವಾಗಿ ಮುರಿಯಲಿದ್ದಾರೆ.
ಹಿಂದುಳಿದ ವರ್ಗಗಳ ಹರಿಕಾರ ಎನಿಸಿಕೊಂಡಿದ್ದ ಡಿ. ದೇವರಾಜ ಅರಸು ಅವರು 7 ವರ್ಷ 239 ದಿನಗಳ ಕಾಲ ರಾಜ್ಯವನ್ನು ಮುನ್ನಡೆಸಿದ್ದರು. ಈ ಪಟ್ಟಿಯಲ್ಲಿ ಈವರೆಗೆ ಅರಸು ಮೊದಲ ಸ್ಥಾನದಲ್ಲಿದ್ದರೆ, ಸಿದ್ದರಾಮಯ್ಯ ಎರಡನೇ ಸ್ಥಾನದಲ್ಲಿದ್ದರು. ಇದೀಗ ಸಿದ್ದರಾಮಯ್ಯ ಅವರು ಅರಸು ಅವರ ದಾಖಲೆಯನ್ನು ದಾಟಿ ಮುನ್ನುಗ್ಗುತ್ತಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿರುವ ಪ್ರಮುಖರೆಂದರೆ:
ಎಸ್. ನಿಜಲಿಂಗಪ್ಪ: 7 ವರ್ಷ 175 ದಿನ (3ನೇ ಸ್ಥಾನ)
ರಾಮಕೃಷ್ಣ ಹೆಗಡೆ: 5 ವರ್ಷ 216 ದಿನ (4ನೇ ಸ್ಥಾನ)
ಬಿ.ಎಸ್. ಯಡಿಯೂರಪ್ಪ: 5 ವರ್ಷ 82 ದಿನ (5ನೇ ಸ್ಥಾನ)
2013 ರಿಂದ 2018ರವರೆಗೆ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯ, ನಂತರ ನಡೆದ ರಾಜಕೀಯ ಏರಿಳಿತಗಳ ನಡುವೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿದ ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಇದೀಗ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಕೇವಲ ಆಡಳಿತಾವಧಿಯಲ್ಲಷ್ಟೇ ಅಲ್ಲದೆ, ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಅಜೇಯರಾಗಿ ಉಳಿದಿದ್ದಾರೆ. ಈವರೆಗೆ ಒಟ್ಟು 16 ಬಾರಿ ರಾಜ್ಯ ಬಜೆಟ್ ಮಂಡಿಸುವ ಮೂಲಕ ಅವರು ದೇಶದ ಗಮನ ಸೆಳೆದಿದ್ದಾರೆ. ಈ ಹಿಂದೆ 13 ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ ಅವರ ದಾಖಲೆ ಈಗಾಗಲೇ ಸಿದ್ದರಾಮಯ್ಯ ಅವರ ಹೆಸರಿಗೆ ವರ್ಗಾವಣೆಗೊಂಡಿದೆ.
ಸಿದ್ದರಾಮಯ್ಯ ಅವರ ಈ ಸಾಧನೆಯನ್ನು ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಬೆಂಗಳೂರಿನ ಅವರ ಅಧಿಕೃತ ನಿವಾಸ ‘ಕಾವೇರಿ’ ಸುತ್ತಮುತ್ತ ಬೃಹತ್ ಬ್ಯಾನರ್ ಮತ್ತು ಪೋಸ್ಟರ್‌ಗಳು ರಾರಾಜಿಸುತ್ತಿವೆ. “ದೀರ್ಘಾವಧಿ ಸಿಎಂ ಸಿದ್ದರಾಮಯ್ಯ” ಎಂಬ ಘೋಷಣೆಗಳೊಂದಿಗೆ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.

