ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ನೀಡುವ ಮೂಲಕ ರಾಜ್ಯ ಸರ್ಕಾರವು ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್‌ನ ವೈಯಕ್ತಿಕ ಖಜಾನೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, “ನ್ಯಾಷನಲ್ ಹೆರಾಲ್ಡ್ ಒಂದು ‘ಬೋಗಸ್’ ಪತ್ರಿಕೆಯಾಗಿದ್ದು, ಕರ್ನಾಟಕದ ಯಾವೊಬ್ಬ ನಾಗರಿಕರ ಮನೆಗೂ ಈ ಪತ್ರಿಕೆ ತಲುಪುತ್ತಿಲ್ಲ. ಇಂತಹ ಪತ್ರಿಕೆಗೆ ಕಳೆದ ಎರಡುವರೆ ವರ್ಷಗಳಲ್ಲಿ ಸುಮಾರು 4 ಕೋಟಿ ರೂಪಾಯಿಗಳಷ್ಟು ಹಣವನ್ನು ಜಾಹೀರಾತು ರೂಪದಲ್ಲಿ ನೀಡಲಾಗಿದೆ. ಇಡೀ ವಿಶ್ವದಿಂದ ಆ ಪತ್ರಿಕೆಗೆ ಬರುವ ಒಟ್ಟು ಜಾಹೀರಾತಿನಲ್ಲಿ ಶೇ. 31ರಷ್ಟು ಮಾತ್ರ ಹೊರಗಿನಿಂದ ಬರುತ್ತಿದ್ದರೆ, ಸಿಂಹಪಾಲು ಅಂದರೆ ಶೇ. 69ರಷ್ಟು ಹಣ ಕೇವಲ ಕರ್ನಾಟಕದಿಂದಲೇ ಹೋಗುತ್ತಿದೆ,” ಎಂದು ಅಂಕಿಅಂಶಗಳ ಸಮೇತ ಕಿಡಿಕಾರಿದರು.
“ಇದು ಜನರ ತೆರಿಗೆ ಹಣದ ಹಗಲು ದರೋಡೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಂತಹ ನಾಯಕರು ಈ ಪ್ರಕರಣದಲ್ಲಿ ಬೇಲ್ ಮೇಲೆ ಇದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ಪತ್ರಿಕೆಗೆ ಕೋಟ್ಯಂತರ ಹಣ ಸುರಿಯುತ್ತಿರುವುದು ಅಕ್ಷಮ್ಯ ಅಪರಾಧ. ಗೃಹಲಕ್ಷ್ಮಿ ಯೋಜನೆಯಂತಹ ಜನಪರ ಯೋಜನೆಗಳಿಗೆ ಹಣ ನೀಡದೆ, ಪತ್ರಿಕೆಯ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ,” ಎಂದು ಆರೋಪಿಸಿದ ಅಶೋಕ್, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು.

