ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಾಗತಿಕ ವಾಣಿಜ್ಯ ರಂಗದಲ್ಲಿ ಕರ್ನಾಟಕವನ್ನು ಒಂದು ಶಕ್ತಿಯುತ ಕೇಂದ್ರವನ್ನಾಗಿ ರೂಪಿಸುವ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಾಜ್ಯವು ಅದ್ವಿತೀಯ ಪಾತ್ರ ವಹಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗುವಂತೆ ಕರೆ ನೀಡಿದ್ದಾರೆ.
ಕೃತಕ ಬುದ್ಧಿಮತ್ತೆಯ (AI) ಕ್ರಾಂತಿಕಾರಕ ಬೆಳವಣಿಗೆಯಿಂದಾಗಿ ಜಾಗತಿಕ ಉತ್ಪಾದನಾ ವಿಧಾನಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಈ ತಾಂತ್ರಿಕ ವೇಗಕ್ಕೆ ತಕ್ಕಂತೆ ರಾಜ್ಯದ ಆರ್ಥಿಕತೆ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಅಣಿಗೊಳಿಸುವುದು ಇಂದಿನ ಅಗತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ನಾವೀನ್ಯತೆಗಳೇ ರಾಜ್ಯದ ಭವಿಷ್ಯದ ಸ್ಥಿತಿಗತಿಗಳನ್ನು ನಿರ್ಧರಿಸುವ ಅತಿ ಮುಖ್ಯ ಅಂಶಗಳಾಗಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸ ತಂತ್ರಜ್ಞಾನಗಳು ಸವಾಲಿನಂತೆ ಕಂಡರೂ, ಆ “ಬೆಂಕಿಯನ್ನು ಬೆಳಕಾಗಿಸಿಕೊಳ್ಳುವ” ಅಚಲ ಸಂಕಲ್ಪದೊಂದಿಗೆ ಸರ್ಕಾರ ಮುನ್ನಡೆಯುತ್ತಿದೆ. ಜಾಗತಿಕ ಮಟ್ಟದ ಈ ಬದಲಾವಣೆಗಳನ್ನು ರಾಜ್ಯದ ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳುವ ದೂರದೃಷ್ಟಿ ಈ ಬಾರಿಯ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ.



