ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತನಿಖೆಗಾಗಿ ಹಿರಿಯ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಆಸ್ರಾ ಗರ್ಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಆದೇಶಿಸಿದೆ.
ಕಾಲ್ತುಳಿತದ ಸಮಯದಲ್ಲಿ ಆ ಜಾಗದಿಂದ ವಿಜಯ್ ಓಡಿಹೋಗಿದ್ದಾರೆ. ಇದು ಆ ನಟ-ರಾಜಕಾರಣಿಯ ಮಾನಸಿಕ ಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 41 ಜೀವಗಳನ್ನು ಬಲಿ ಪಡೆದ ಕಾಲ್ತುಳಿತವನ್ನು ತಪ್ಪಾಗಿ ನಿರ್ವಹಿಸಲಾಗಿದೆ ಎಂದು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ಹೇಳಿದ್ದಾರೆ. ತಮಿಳುನಾಡು ರಾಜ್ಯವು ವಿಜಯ್ ಕಡೆಗೆ ಮೃದು ಧೋರಣೆ ತಳೆದಿದೆ ಎಂದು ಅವರು ಟೀಕಿಸಿದ್ದಾರೆ.
ನ್ಯಾಯಮೂರ್ತಿ ಸೆಂಥಿಲ್‌ಕುಮಾರ್, ಆ ರ‍್ಯಾಲಿಯ ಆಯೋಜಕರು ಮತ್ತು ಪೊಲೀಸರನ್ನು ಅವರ ಜವಾಬ್ದಾರಿಯ ಬಗ್ಗೆ ಪ್ರಶ್ನಿಸಿದ್ದು, ‘ಈ ಕಾರ್ಯಕ್ರಮದ ಆಯೋಜಕರಾಗಿ ನಿಮಗೆ ಯಾವುದೇ ಜವಾಬ್ದಾರಿ ಇಲ್ಲವೇ?ಎಂದು ಅವರು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದಾಗ ವಿಜಯ್ ವಿಮಾನದಲ್ಲಿ ಪಲಾಯನ ಮಾಡಿದ ನಡವಳಿಕೆಯನ್ನು ಕೋರ್ಟ್ ಬಲವಾಗಿ ಖಂಡಿಸಿತು.
ಟಿವಿಕೆ ನಾಯಕರಾದ ಬುಸ್ಸಿ ಆನಂದ್ ಮತ್ತು ಸಿಟಿಆರ್ ನಿರ್ಮಲ್ ಕುಮಾರ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗಳ ಮೇಲಿನ ಆದೇಶಗಳನ್ನು ಮದ್ರಾಸ್ ಹೈಕೋರ್ಟ್ ನ್ಯಾಯಪೀಠ ಕಾಯ್ದಿರಿಸಿದೆ.