March 26, 2026
Thursday, March 26, 2026
spot_img

ರಣಜಿ ಕಣದಲ್ಲಿ ಕಾಶ್ಮೀರಿ ಕಲಿಗಳ ಆರ್ಭಟ: ಪಂದ್ಯ ವೀಕ್ಷಿಸಲು ಆಗಮಿಸಿದ ಸಿಎಂ ಒಮರ್ ಅಬ್ದುಲ್ಲಾ!

ಹೊಸದಿಗಂತ ಹುಬ್ಬಳ್ಳಿ:

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಪಂದ್ಯವು ರೋಚಕ ಹಂತಕ್ಕೆ ತಲುಪಿದೆ. ಈ ಪಂದ್ಯಕ್ಕೆ ವಿಶೇಷ ಮೆರುಗು ನೀಡಲು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶನಿವಾರ ಬೆಳಿಗ್ಗೆ ಮೈದಾನಕ್ಕೆ ಭೇಟಿ ನೀಡಿದರು.

ಬೆಳಿಗ್ಗೆ 9:38ಕ್ಕೆ ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ತಮ್ಮ ರಾಜ್ಯದ ಆಟಗಾರರ ನಡುವೆ ಕುಳಿತು ಪಂದ್ಯವನ್ನು ವೀಕ್ಷಿಸುವ ಮೂಲಕ ತಂಡದ ಹುಮ್ಮಸ್ಸು ಹೆಚ್ಚಿಸಿದರು.

ಜಮ್ಮು ಕಾಶ್ಮೀರದ ಆರಂಭಿಕ ಆಟಗಾರ ಕಮ್ರಾನ್ ಇಕ್ಬಾಲ್ ಅದ್ಭುತ ಪ್ರದರ್ಶನ ನೀಡಿದ್ದು, 199 ಎಸೆತಗಳಲ್ಲಿ 106 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.

ಇವರಿಗೆ ಸಾಹಿಲ್ ಲೋತ್ರಾ (40 ರನ್) ಉತ್ತಮ ಬೆಂಬಲ ನೀಡುತ್ತಿದ್ದು, ಕರ್ನಾಟಕದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ.

ಎರಡನೇ ಇನ್ನಿಂಗ್ಸ್‌ನ 5ನೇ ದಿನದಾಟ ಮುಂದುವರಿದಿದ್ದು, 76 ಓವರ್‌ಗಳ ಮುಕ್ತಾಯಕ್ಕೆ ಜಮ್ಮು ಕಾಶ್ಮೀರ 4 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದೆ. ಸದ್ಯ ಕರ್ನಾಟಕದ ವಿರುದ್ಧ 513 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ.

ಐದನೇ ದಿನದ ಮೊದಲ ಅವಧಿಯಲ್ಲಿ ಕರ್ನಾಟಕದ ಬೌಲರ್‌ಗಳು ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದು, ಜಮ್ಮು ಕಾಶ್ಮೀರ ಬ್ಯಾಟರ್‌ಗಳು ಪಟ್ಟು ಬಿಡದೆ ಆಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !