Saturday, December 13, 2025

ಪಾಕಿಸ್ತಾನ ಜೊತೆಗೆ ನಂಟು ಆರೋಪ: ಅರುಣಾಚಲ ಪ್ರದೇಶದಲ್ಲಿ ಕಾಶ್ಮೀರ ನಿವಾಸಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಜೊತೆಗೆ ನಂಟು ಹೊಂದಿದ ಆರೋಪದ ಮೇರೆಗೆ ಅರುಣಾಚಲ ಪ್ರದೇಶದಲ್ಲಿ ಮೂವರು ಕಾಶ್ಮೀರದ ನಿವಾಸಿಗಳನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ 26 ವರ್ಷದ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವೇ ವಾರಗಳಲ್ಲಿ ನಡೆದ ಮೂರನೇ ಬಂಧನ ಇದಾಗಿದೆ.

ಜಿಲ್ಲೆಯ ಆಲೋ ಪಟ್ಟಣದಲ್ಲಿ ವಾಸವಾಗಿದ್ದ ಆರೋಪಿ ಹಿಲಾಲ್ ಅಹ್ಮದ್ ನನ್ನು ಹಿಮಾಲಯ ಗಡಿ ರಾಜ್ಯದ ಪೊಲೀಸರು ಬಂಧಿಸಿದ್ದಾರೆ. ಈತ ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ.

ಸೈನಿಕರ ಚಲನವಲನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸಿದ್ದಕ್ಕಾಗಿ ಮೊದಲ ಆರೋಪಿ ನಜೀರ್ ಅಹ್ಮದ್ ಮಲಿಕ್ ನನ್ನು ನವೆಂಬರ್ 22 ರಂದು ಬಂಧಿಸಲಾಗಿತ್ತು. ಈತ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ನಿವಾಸಿ ಎಂಬುದು ತಿಳಿದುಬಂದಿದೆ.ತದನಂತರ, ಎರಡನೇ ಆರೋಪಿ, ಕುಪ್ವಾರದ ನಿವಾಸಿಯೂ ಆಗಿರುವ ಸಬೀರ್ ಅಹ್ಮದ್ ಮಿರ್‌ನನ್ನು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ಬಂಧಿಸಲಾಗಿತ್ತು.

ಮೂವರು ಆರೋಪಿಗಳು ಜಮ್ಮು ಮತ್ತು ಕಾಶ್ಮೀರದಿಂದ 3,000 ಕಿಮೀ ದೂರದಲ್ಲಿರುವ ಅರುಣಾಚಲ ಪ್ರದೇಶದಲ್ಲಿ ವಾಸಿಸುವ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

error: Content is protected !!