ನಮ್ಮ ಜೀವನದಲ್ಲಿ ಅಭ್ಯಾಸಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಉತ್ತಮ ಅಭ್ಯಾಸಗಳು ನಮ್ಮನ್ನು ಯಶಸ್ಸಿನ ಶಿಖರಕ್ಕೆ ಕರೆದೊಯ್ದರೆ, ಕೆಟ್ಟ ಅಭ್ಯಾಸಗಳು ಇಡೀ ಜೀವನವನ್ನೇ ಹಾಳುಮಾಡಬಲ್ಲವು. ಅದರಲ್ಲೂ ಪುರುಷರ ಕೆಲವೊಂದು ಕೆಟ್ಟ ಅಭ್ಯಾಸಗಳು ಇಡೀ ಕುಟುಂಬದ ಶಾಂತಿ ಮತ್ತು ನೆಮ್ಮದಿಯನ್ನೇ ನಾಶಮಾಡುತ್ತವೆ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಹೇಳಿದ್ದಾರೆ.
ಯಾವ ಅಭ್ಯಾಸಗಳು ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತವೆ? ಇಲ್ಲಿದೆ ವಿವರ:
ಹೆಂಡತಿಯನ್ನು ಅಗೌರವಿಸುವುದು
ಚಾಣಕ್ಯ ನೀತಿಯ ಪ್ರಕಾರ, ತನ್ನ ಪತ್ನಿಗೆ ಗೌರವ ನೀಡದ ಪುರುಷನು ತನ್ನ ಮನೆಯಲ್ಲಿ ಎಂದಿಗೂ ಶಾಂತಿ ನೆಲೆಸಲು ಬಿಡುವುದಿಲ್ಲ. ಗಂಡನು ಪದೇ ಪದೇ ಹೆಂಡತಿಯನ್ನು ಅವಮಾನಿಸಿದರೆ, ಅವಳ ಭಾವನೆಗಳನ್ನು ನಿರ್ಲಕ್ಷಿಸಿದರೆ, ಅದು ಆಕೆಯ ಮನಸ್ಸಿಗೆ ತೀವ್ರ ನೋವುಂಟುಮಾಡುತ್ತದೆ. ಇಂತಹ ಮನೆಯಲ್ಲಿ ಪ್ರೀತಿಗಿಂತ ಉದ್ವಿಗ್ನತೆ, ಸಂಘರ್ಷ ಮತ್ತು ನಕಾರಾತ್ಮಕ ವಾತಾವರಣವೇ ತುಂಬಿರುತ್ತದೆ.
ಅನೈತಿಕ ಸಂಬಂಧವನ್ನು ಹೊಂದುವುದು
ಸಂಬಂಧದಲ್ಲಿ ನಿಷ್ಠೆ ಬಹಳ ಮುಖ್ಯ. ಪುರುಷನು ವಿವಾಹದ ಹೊರಗೆ ಅನೈತಿಕ ಸಂಬಂಧವನ್ನು ಹೊಂದಿದರೆ, ಅದು ಇಡೀ ಸಂಸಾರವನ್ನೇ ಹಾಳುಮಾಡುತ್ತದೆ. ಇದು ಕೇವಲ ವೈಯಕ್ತಿಕ ಸಂಬಂಧಕ್ಕೆ ಧಕ್ಕೆ ತರುವುದಲ್ಲದೆ, ಕುಟುಂಬದ ಖ್ಯಾತಿ, ಗೌರವ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಅನಿಯಂತ್ರಿತ ಸಾಲ ಮಾಡುವುದು
ತಮ್ಮ ಅಗತ್ಯಗಳನ್ನು ಪೂರೈಸಲು ಪದೇ ಪದೇ ಸಾಲ ಮಾಡುವ ಅಭ್ಯಾಸ ಕೆಲವರಲ್ಲಿರುತ್ತದೆ. ಚಾಣಕ್ಯರ ಪ್ರಕಾರ, ತಮ್ಮ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗದ ಮತ್ತು ನಿರಂತರವಾಗಿ ಸಾಲದ ಸುಳಿಗೆ ಸಿಲುಕುವ ವ್ಯಕ್ತಿಗಳು ಇಡೀ ಕುಟುಂಬವನ್ನು ತೊಂದರೆಗೆ ಸಿಲುಕಿಸುತ್ತಾರೆ. ಈ ದುರಭ್ಯಾಸವು ಕುಟುಂಬವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದಲ್ಲದೆ, ಮಾನಸಿಕ ಒತ್ತಡ ಮತ್ತು ಮನೆಮಂದಿಯ ನಡುವೆ ಸಂಘರ್ಷಕ್ಕೂ ಕಾರಣವಾಗುತ್ತದೆ.
ಜವಾಬ್ದಾರಿಗಳಿಂದ ಓಡಿಹೋಗುವುದು
ಕುಟುಂಬದ ಸದಸ್ಯರ ಜವಾಬ್ದಾರಿಗಳನ್ನು ಹೊರಲು ಹಿಂದೆ ಸರಿಯುವ, ಕರ್ತವ್ಯಗಳಿಂದ ಓಡಿಹೋಗುವ ವ್ಯಕ್ತಿಯಿಂದ ಮನೆಯ ನೆಮ್ಮದಿ ಹಾಳಾಗುತ್ತದೆ. ಆತ ತನ್ನ ಕುಟುಂಬವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಚಾಣಕ್ಯರ ಪ್ರಕಾರ, ತಮ್ಮ ಕುಟುಂಬದ ಕಡೆಗಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸುವ ಪುರುಷರು ತಮ್ಮ ಮನೆಯ ಶಾಂತಿಯನ್ನು ಭಂಗಗೊಳಿಸುತ್ತಾರೆ.
ಈ ನಾಲ್ಕು ಅಭ್ಯಾಸಗಳು ಪುರುಷರಲ್ಲಿ ಇದ್ದರೆ, ಅವರ ಮನೆಯ ನೆಮ್ಮದಿ ಮತ್ತು ಸಮೃದ್ಧಿ ನಾಶವಾಗುವುದು ಖಚಿತ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.

