January19, 2026
Monday, January 19, 2026
spot_img

Parenting| ಮಕ್ಕಳಿಗೆ ನೀಡುವ ಸ್ಕ್ರೀನ್ ಟೈಮ್ ಮೇಲೆ ನಿಗಾ ಇರಲಿ: ಆರೋಗ್ಯಕ್ಕೆ ಎಚ್ಚರಿಕೆಯ ಗಂಟೆ ಇದು!

ಸ್ಮಾರ್ಟ್‌ಫೋನ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳು ಇಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದರೂ, ಅವುಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗುತ್ತಿದೆ. ವಿಶೇಷವಾಗಿ ಮಕ್ಕಳು ಹಾಗೂ ಯುವಕರು ಗಂಟೆಗಟ್ಟಲೆ ಮೊಬೈಲ್‌ನಲ್ಲಿ ರೀಲ್ಸ್, ವಿಡಿಯೋಗಳು ಮತ್ತು ಗೇಮ್‌ಗಳಲ್ಲಿ ತೊಡಗಿಸಿಕೊಂಡು ಕಳೆಯುತ್ತಿರುವುದು ಗಂಭೀರ ಆರೋಗ್ಯ ಸಮಸ್ಯೆಗಳತ್ತ ದಾರಿ ಮಾಡಿಕೊಟ್ಟಿದೆ. ವೈದ್ಯಕೀಯ ವರದಿಗಳ ಪ್ರಕಾರ ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ನಿದ್ರೆ, ಕಣ್ಣು ಮತ್ತು ದೈಹಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಸ್ಕ್ರೀನ್ ಟೈಮ್‌ನ ನಕಾರಾತ್ಮಕ ಪರಿಣಾಮಗಳು:
ಮೊಬೈಲ್ ಹಾಗೂ ಟಿವಿ ಪರದೆಗಳಿಂದ ಹೊರಬರುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿಕಾರಕವಾಗಿದ್ದು, ದೃಷ್ಟಿ ಶಕ್ತಿ ನಿಧಾನವಾಗಿ ಕುಂದುವ ಸಾಧ್ಯತೆ ಹೆಚ್ಚಿದೆ. ಮೆಲಟೋನಿನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುವುದರಿಂದ ಮಕ್ಕಳ ನಿದ್ರಾ ಚಕ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ಸರಿಯಾದ ನಿದ್ರೆ ಸಿಗದಿದ್ದರೆ ದೈನಂದಿನ ಚಟುವಟಿಕೆ ಮತ್ತು ವಿದ್ಯಾಭ್ಯಾಸದ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದಲ್ಲದೆ, ಫೋನ್‌ ಬಳಕೆಯಿಂದ ಮಕ್ಕಳು ಹೊರಾಂಗಣ ಆಟಗಳು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ. ಇದು ದೈಹಿಕ ಸಾಮರ್ಥ್ಯ ಕುಂದುವ ಅಪಾಯವನ್ನು ಹೆಚ್ಚಿಸಿದೆ.

ನಿಯಂತ್ರಣಕ್ಕೆ ತರಲು ಕೈಗೊಳ್ಳಬಹುದಾದ ಕ್ರಮಗಳು:
ಮಕ್ಕಳಿಗೆ ಫೋನ್‌ ಬಳಸುವ ಸಮಯವನ್ನು ನಿಗದಿಪಡಿಸುವುದು ಅತ್ಯಂತ ಮುಖ್ಯ. ಅವರಿಗೆ ಹೊರಾಂಗಣ ಆಟಗಳು ಹಾಗೂ ಶಾರೀರಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಂವಹನ ನಡೆಸಿ, ಕಥೆಗಳನ್ನು ಹೇಳುವುದು ಅಥವಾ ಒಟ್ಟಿಗೆ ಆಟವಾಡುವುದರಿಂದ ಫೋನ್‌ನಿಂದ ಗಮನ ಬೇರೆಡೆ ತಿರುಗಬಹುದು.

ಜೊತೆಗೆ, ಟಿವಿ, ವಿಡಿಯೋ ಗೇಮ್ ಹಾಗೂ ಲ್ಯಾಪ್‌ಟಾಪ್‌ ಬಳಕೆಗೆ ಸಮಯ ಮಿತಿ ನಿಗದಿಪಡಿಸಬೇಕು. ನಿಯಮಿತ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಿಂದ ಮಕ್ಕಳ ಆರೋಗ್ಯವನ್ನು ಕಾಪಾಡಬಹುದು.

ಸ್ಮಾರ್ಟ್‌ ಸಾಧನಗಳ ಬಳಕೆ ಸಂಪೂರ್ಣ ನಿಲ್ಲಿಸುವುದು ಸಾಧ್ಯವಿಲ್ಲ, ಆದರೆ ಅದನ್ನು ನಿಯಂತ್ರಿಸುವುದು ಪೋಷಕರ ಜವಾಬ್ದಾರಿ. ಸ್ಕ್ರೀನ್ ಟೈಮ್‌ ಕಡಿಮೆ ಮಾಡಿ ಮಕ್ಕಳನ್ನು ಹೊರಾಂಗಣ ಚಟುವಟಿಕೆ, ವ್ಯಾಯಾಮ ಮತ್ತು ಉತ್ತಮ ನಿದ್ರಾ ಪದ್ಧತಿಗಳತ್ತ ಒಲಿಸುವುದೇ ಆರೋಗ್ಯಕರ ಭವಿಷ್ಯದ ಬುನಾದಿ.

Must Read

error: Content is protected !!