ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2025ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಚಾರದಲ್ಲಿ ಶೇ. 8 ರಷ್ಟು ಗಣನೀಯ ಏರಿಕೆ ಕಂಡಿದ್ದು, ಒಟ್ಟು 43.82 ಮಿಲಿಯನ್ ಪ್ರಯಾಣಿಕರು ಈ ವರ್ಷ ಇಲ್ಲಿಂದ ಪ್ರಯಾಣ ಬೆಳೆಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 28.7 ರಷ್ಟು ವೃದ್ಧಿಯಾಗಿದೆ. ಅಲ್ಲದೆ, ಅಂತಾರಾಷ್ಟ್ರೀಯ ನಿರ್ಗಮನಗಳ ಸಂಖ್ಯೆ 38 ರಿಂದ 51ಕ್ಕೆ ಏರಿಕೆಯಾಗಿದೆ.
ನವೆಂಬರ್ 23, 2025 ರಂದು ಒಂದೇ ದಿನ ದಾಖಲೆಯ 1,37,317 ಪ್ರಯಾಣಿಕರು ಸಂಚರಿಸಿದ್ದಾರೆ. ಅಕ್ಟೋಬರ್ 19 ರಂದು ಗರಿಷ್ಠ 837 ವಿಮಾನಗಳ ಹಾರಾಟ ನಡೆದಿದೆ.
ಒಟ್ಟು 5,20,985 ಟನ್ ಸರಕು ನಿರ್ವಹಣೆ ಮಾಡುವ ಮೂಲಕ ಶೇ. 5ರಷ್ಟು ಬೆಳವಣಿಗೆ ಸಾಧಿಸಿದೆ. ವಿಶೇಷವೆಂದರೆ, ಒಂದೇ ದಿನದಲ್ಲಿ 2,207 ಟನ್ ಸರಕು ಸಾಗಾಟ ಮಾಡಿ ಹೊಸ ದಾಖಲೆ ಬರೆದಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ 5 ದೇಶೀಯ ಮತ್ತು 5 ಅಂತಾರಾಷ್ಟ್ರೀಯ ಸೇರಿದಂತೆ ಒಟ್ಟು 10 ಹೊಸ ವಿಮಾನಯಾನ ಮಾರ್ಗಗಳನ್ನು ಆರಂಭಿಸಲಾಗಿದೆ.
ಕಾರ್ಯಕ್ಷಮತೆ, ಪ್ರಯಾಣಿಕರ ಸೇವೆ ಮತ್ತು ಸರಕು ನಿರ್ವಹಣೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವು ತೋರಿರುವ ಈ ಸಾಧನೆ, ಬೆಂಗಳೂರನ್ನು ಜಾಗತಿಕ ಸಾರಿಗೆ ಭೂಪಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.


