January18, 2026
Sunday, January 18, 2026
spot_img

ಕೇಪು ಕಜಂಬು ಜಾತ್ರೆ: ಇಲ್ಲಿದೆ ದೇವಿಗೆ ತಮ್ಮ‌ ಮಕ್ಕಳನ್ನೇ ಹರಕೆ ಒಪ್ಪಿಸುವ ವಿಶಿಷ್ಟ ಸಂಪ್ರದಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳನ್ನುಸಾಂಕೇತಿಕವಾಗಿ ದೇವರಿಗೆ ಹರಕೆ ರೂಪದಲ್ಲಿ ಸಮರ್ಪಿಸುವ ವಿಶಿಷ್ಟ ನಂಬಿಕೆ, ಸಂಪ್ರದಾಯವಿರುವ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕೇಪು ಕಜಂಬು ಉತ್ಸವ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆಯಿತು.

ವಿಟ್ಲ ಡೊಂಬ ಹೆಗ್ಗಡೆ ಅರಮನೆಯ ಬಂಗಾರು ಅರಸರು ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ, ದೇವಿಗೆ ಐದು ಸುತ್ತು ಪಲ್ಲಕ್ಕಿ ಬಲಿ ಉತ್ಸವ ನಡೆಯಿತು. ಬಲಿ ಉತ್ಸವದ ಬಳಿಕ ಪ್ರಧಾನ ದೇವಿ ಹಾಗೂ ಪರಿವಾರ ಶಕ್ತಿಗಳಿಗೆ ಪೂಜೆ ನೆರವೇರಿಸಿದ ನಂತರ ಕಜಂಬು ಹರಕೆಗೆ ಚಾಲನೆ ನೀಡಲಾಯಿತು.

ಹರಕೆ ಸಲ್ಲಿಸಲ್ಪಡುವ ಮಕ್ಕಳನ್ನು ಜಳಕದ ಗುಂಡಿಯಲ್ಲಿ ಸ್ನಾನ ಮಾಡಿಸಿದ ಬಳಿಕ ಗರ್ಭಗುಡಿಯ ಮುಖ್ಯದ್ವಾರದಲ್ಲಿ ಮಕ್ಕಳನ್ನು ದೇವರಿಗೆ ಕಜಂಬು ಹರಕೆಯ‌ ಮೂಲಕ ಸಮರ್ಪಿಸಲಾಯಿತು. ಆ ನಂತರ ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ಕುಳಿತಿರುವ ‘ನಾಲ್ಪೊಲು’ ಗಳಿಗೆ ಮುಷ್ಟಿ ನಾಣ್ಯ ಹರಕೆ ಸಲ್ಲಿಸಲಾಯಿತು. ಸುತ್ತಮುತ್ತಲಿನ ಹಾಗೂ ದೂರದ ಹತ್ತಾರು ಗ್ರಾಮಗಳ, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಹಸ್ರಾರು ಮಕ್ಕಳು ‘ಕಜಂಬು’ ಹರಕೆಗೆ ಸಮರ್ಪಣೆಗೊಂಡರು.

ಕಜಂಬು ಹರಕೆಯ ಬಳಿಕ ನೆರಿ ಇಳಿಯುವುದರೊಂದಿಗೆ ಉಳ್ಳಾಲ್ತಿ ದೈವಕ್ಕೆ ವರ್ಷಾವಧಿ ನೇಮೋತ್ಸವ ನಡೆಯಿತು. ಊರು, ಸುತ್ತಮುತ್ತಲಿನ ಹತ್ತೂರುಗಳ ಹಾಗೂ ದೂರದ ಊರುಗಳಿಂದಲೂ ಸಹಸ್ರಾರು ಭಕ್ತರು ಕಜಂಬು ಜಾತ್ರೋತ್ಸವದಲ್ಲಿ ಭಾಗಿಗಳಾದರು. ಜಾತ್ರೋತ್ಸವದಲ್ಲಿ ಅನ್ನಸಂತರ್ಪಣೆ ನಡೆಯಿತು.

Must Read

error: Content is protected !!