ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಡಪಕ್ಷ-ಸಂಘಟನೆಗಳು ಗುರುವಾರ ನೀಡಿದ್ದ 24 ಗಂಟೆಗಳ ಭಾರತ್ ಬಂದ್ ಕರೆಯನ್ನು ಖಂಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರು , ಇದು ಕೇವಲ ಇನ್ನೊಂದು “ಕೇರಳ ಬಂದ್”ಅಷ್ಟೇ ಎಂದಿದ್ದಾರಲ್ಲದೆ, ಇಂತಹ ಬಂದ್‌ಗಳಿಂದ ನಾಗರಿಕರ ಸ್ವಾತಂತ್ರ್ಯದ ಅತಿಕ್ರಮಣವಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ. ಈ ಮೂಲಕ ದೇಶ ಮುಂದೆ ಸಾಗುತ್ತಿದ್ದರೆ, ಕೇರಳ ಇನ್ನೂ ಇಂತಹ ಬಂದ್ ಸಂಸ್ಕೃತಿಯ ಮನಃಸ್ಥಿತಿಯಿಂದ ಹೊರಬಂದಿಲ್ಲ ಎಂಬುದನ್ನು ತರೂರು ಎಚ್ಚರಿಸಿದ್ದಾರೆ.
“ಭಾರತದ ಉಳಿದೆಲ್ಲ ಭಾಗಗಳೂ ಇಂತಹ ಬಲಾತ್ಕಾರದ ನಿರ್ಬಂಧಗಳನ್ನು ದಾಟಿ ವಿಕಸನಗೊಳ್ಳುತ್ತಿದ್ದರೂ, ಕೇರಳ ಇನ್ನೂ ಅಸಂಘಟಿತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಸಂಘಟಿತ ದಬ್ಬಾಳಿಕೆಯಿಂದ ಒತ್ತೆಯಾಳುಗಳಂತೆ ಮುಂದುವರಿಯುತ್ತಿರುವುದು “ಶೋಚನೀಯ ವ್ಯಂಗ್ಯ”ವೇ ಸರಿ ಎಂಬುದಾಗಿ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ .ಬಂದ್ ಸಂಸ್ಕೃತಿ , ವಾಮವಿಚಾರಗಳ ಸಂಕುಚಿತತೆಯಿಂದ ಸಾಕ್ಷರ ಕೇರಳ ಹಿಂದೆ ಬೀಳುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ ಶಶಿ ತರೂರ್ ಕೇರಳದ ಬಂದ್ ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿದ್ದಾರೆ.
ಕೇರಳದಲ್ಲಿ ಉಗ್ರಗಾಮಿ ಟ್ರೇಡ್ ಯೂನಿಯನಿಸಂ ಕೈಗಾರಿಕೆಗಳನ್ನು ಕೇರಳದಿಂದ ದೂರ ಇಟ್ಟಿವೆ.ತೋಳ್ಬಲದ ಶಕ್ತಿ ಬಳಸುವ ಓಬಿರಾಯನ ಕಾಲದ ವಿಧಾನಗಳೊಂದಿಗೆ ಕೇರಳ ಮುಂದುವರಿದದ್ದೇ ಆದರೆ ಇದು ಕೇರಳದ ಭವಿಷ್ಯಕ್ಕೆ ಇನ್ನಷ್ಟು ಹಾನಿಯನ್ನುಂಟು ಮಾಡಲಿದೆ ಎಂದು ಶಶಿ ತರೂರು ಎಚ್ಚರಿಸಿದ್ದು, ಕೇರಳದ ಜನತೆ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವನ್ನು ಎತ್ತಿತೋರಿದ್ದಾರೆ.
ಈಗ ಬಂದ್‌ನ ಹೆಸರಿನಲ್ಲಿ ತೋಳ್ಬಲದ ಶಕ್ತಿಯ ಈ ಓಬಿರಾಯನ ವಿಧಾನಗಳ ಮೂಲಕ ನಾಗರಿಕರನ್ನು ಅವರ ಸ್ವಂತ ಮನೆಗಳಲ್ಲೇ ಕೈದಿಗಳಂತೆ ಬಲವಂತವಾಗಿ ನಿರ್ಬಂಧಿಸುವುದು , ಅಂಗಡಿಮಾಲಕರು ತಮ್ಮ ಬಾಗಿಲುಗಳನ್ನು ಮುಚ್ಚುವಂತೆ ಬಲವಂತಕ್ಕೀಡಾಗುವುದರಿಂದ ಕೇರಳ ಯುವಜನತೆ ಮತ್ತು ಉದ್ಯಮಗಳಿಗೆ ಸ್ವಾಗತಾರ್ಹ ರಾಜ್ಯವಲ್ಲ ಎಂಬುದನ್ನು ಖಾತ್ರಿಪಡಿಸಿದಂತಾಗಲಿದೆ ಎಂದೂ ಅವರು ಎಚ್ಚರಿಸಿದ್ದಾರೆ.
ಮುಷ್ಕರದ ಹಕ್ಕು ಇತರರ ಮೇಲೆ ಬಲವಂತ ಹೇರಿ ಬಂದ್ ಮಾಡಿಸುವ ಮಟ್ಟಕ್ಕೆ ಹೋಗಬಾರದು. ಇದರಿಂದಾಗಿ ರಾಜ್ಯದ ಜನಜೀವನ, ವಾಣಿಜ್ಯ ವ್ಯವಹಾರ, ಸಂಚಾರ ವ್ಯವಸ್ಥೆಗಳೆಲ್ಲ ಸ್ಥಗಿತಗೊಳ್ಳುವಂತಾಗುತ್ತದೆ. ಇದು ಸಾಮಾನ್ಯ ಜನತೆಯ ಸ್ವಾತಂತ್ರ್ಯದ ಮೇಲಿನ ದಾಳಿಯಾಗುತ್ತದೆ. ಪ್ರತಿಭಟನೆ ‘ನೈತಿಕ ಹೇಳಿಕೆಯಾಗಿ ಉಳಿಯಬೇಕೇ ವಿನಾ ದೈಹಿಕ ನಿರ್ಬಂಧಗಳ ಮೂಲಕ ಅಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.ಬದಲಾಗುತ್ತಿರುವ ಜಗತ್ತಿನಲ್ಲಿ ಕೇರಳ ಸಾಗದೆ ಹೋದರೆ ಅದು ಜಗತ್ತಿನಿಂದ ಪ್ರತ್ಯೇಕವಾಗಿ ಹಿಂದೆ ಬೀಳುವಂತಾಗಲಿದೆ ಎಂದಿದ್ದಾರೆ.



