ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿರಿಯಪಟ್ಟಣದಿಂದ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಕೇರಳದ ತಳಿಪರಂಬಾ ಮೂಲದ ಪಿ.ಪಿ. ಸಾಧಿಕ್ (38) ಮತ್ತು ಅಬ್ದುಲ್ ಅಹಮ್ಮದ್ ತಂಜಳ್ (34) ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಪಿರಿಯಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರಿಂದ ದನ-ಕರುಗಳನ್ನು ಖರೀದಿಸಿ, ಕೇರಳಕ್ಕೆ ಸಾಗಿಸಲು ಸಂಚು ರೂಪಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಲಾರಿಯಲ್ಲಿ ಹತ್ತಕ್ಕೂ ಹೆಚ್ಚು ಗೋವುಗಳನ್ನು ತುಂಬಿಸಿ, ಅವುಗಳ ಮೇಲೆ ಆಲೂಗಡ್ಡೆ ಮೂಟೆಗಳನ್ನು ಪೇರಿಸಿ ಯಾರಿಗೂ ಅನುಮಾನ ಬರದಂತೆ ವ್ಯವಸ್ಥೆ ಮಾಡಿಕೊಂಡಿದ್ದರು.
ಗೋವುಗಳ ಸಾಗಾಟದ ಬಗ್ಗೆ ಮಾಹಿತಿ ಪಡೆದ ಗೋರಕ್ಷಕರು ಪೆರುಂಬಾಡಿ ಪೊಲೀಸ್ ತಪಾಸಣಾ ಕೇಂದ್ರದ ಬಳಿ ಕಾಯುತ್ತಿದ್ದರು. ಮುಂಜಾನೆ ಲಾರಿ ಅಲ್ಲಿಗೆ ತಲುಪುತ್ತಿದ್ದಂತೆ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ಆಲೂಗಡ್ಡೆ ಮೂಟೆಗಳ ಅಡಿಯಲ್ಲಿ ಕಟ್ಟಿಹಾಕಿದ್ದ ಗೋವುಗಳು ಪತ್ತೆಯಾಗಿವೆ. ತಕ್ಷಣ ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿ, ಲಾರಿ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

