January14, 2026
Wednesday, January 14, 2026
spot_img

ಖಾಕಿ ತೊಟ್ಟ ಭೂಗಳ್ಳ! 25 ಕೋಟಿ ಮೌಲ್ಯದ ಭೂಮಿ ಲಪಟಾಯಿಸಿದ ಹೆಡ್ ಕಾನ್ಸ್‌ಟೇಬಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸುವಂತಹ ಬೃಹತ್ ಭೂಗಳ್ಳತನ ಪ್ರಕರಣವೊಂದು ನೆಲಮಂಗಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕರನ್ನು ರಕ್ಷಿಸಬೇಕಿದ್ದ ಮತ್ತು ವಂಚಕರನ್ನು ಸೆರೆ ಹಿಡಿಯಬೇಕಿದ್ದ ಆರಕ್ಷಕನ ವಿರುದ್ಧವೇ ಭೂಗಳ್ಳತನದ ಗಂಭೀರ ಆರೋಪ ಕೇಳಿ ಬಂದಿದೆ. ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ವಿರುದ್ಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸುಮಾರು 25 ಕೋಟಿ ರೂ. ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಲಪಟಾಯಿಸಿದ ಆರೋಪ ಗಿರಿಜೇಶ್ ಮತ್ತು ಆತನ ಸಹಚರರ ಮೇಲಿದೆ. ಗಿರಿಜೇಶ್ ಜೊತೆಗೆ ಮನೋಜ್, ರೋಹಿಣಿ ಸೇರಿದಂತೆ ಇನ್ನೂ ಹಲವರ ವಿರುದ್ಧ ಭೂಗಳ್ಳತನ ಪ್ರಕರಣ ದಾಖಲಿಸಲಾಗಿದೆ.

ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗಿರಿಜೇಶ್‌ನನ್ನು ಅಮಾನತು ಮಾಡಲಾಗಿತ್ತು. ಮನೆಯಲ್ಲಿದ್ದರೂ ಬುದ್ಧಿ ಕಲಿಯದ ಈ ಆರೋಪಿ, ಭೂ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ತನ್ನ ಹಾಗೂ ಇತರ ಸಹಚರರ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಗರಣವು ನೆಲಮಂಗಲ ತಾಲೂಕು, ಸೋಂಪುರ ಹೋಬಳಿಯ ಮಾಚನಹಳ್ಳಿ ಗ್ರಾಮದಲ್ಲಿರುವ 8 ಎಕರೆ ಜಮೀನಿಗೆ ಸಂಬಂಧಿಸಿದೆ. ಈ ಜಮೀನು ಥ್ಯಾಂಪಿ ಮ್ಯಾಥ್ಯೂ ಅವರಿಗೆ ಸೇರಿದ್ದು. ಅವರ ಅರಿವಿಗೆ ಬರದಂತೆ ಮೂರ್ನಾಲ್ಕು ಜನರ ಮೂಲಕ ಈ ಜಮೀನನ್ನು ನೋಂದಣಿ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಈ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ವಶದಲ್ಲಿದೆ ಎನ್ನಲಾಗಿದೆ. KIADB ಯಿಂದ ಬರುವ ಪರಿಹಾರ ಹಣವನ್ನು ಲಪಟಾಯಿಸಲು ಗಿರಿಜೇಶ್ ಈ ಯೋಜನೆಯನ್ನು ರೂಪಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಜಮೀನು ಅಧಿಕೃತವಾಗಿ ನೋಂದಣಿ ಆಗದೇ ಇದ್ದರೂ ದಾಖಲೆಗಳಲ್ಲಿ ಗಿರಿಜೇಶ್ ಹಾಗೂ ಆತನ ಇಬ್ಬರು ಸಹಚರರ ಹೆಸರುಗಳು ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಈ ಸಂಬಂಧ ಜಮೀನು ಮಾಲೀಕ ಥ್ಯಾಂಪಿ ಮ್ಯಾಥ್ಯೂ ಅವರು ನೀಡಿದ ದೂರಿನ ಮೇರೆಗೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಭೂಗಳ್ಳತನದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Most Read

error: Content is protected !!