ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ ಕಥುವಾ ಜಿಲ್ಲೆಯ ಗ್ರಾಮವೊಂದರಲ್ಲಿ ಮನಸೆಳೆಯುವ ಘಟನೆ ಸಂಭವಿಸಿದ್ದು, ಭಾರತೀಯ ಸೇನಾ ವೈದ್ಯರೊಬ್ಬರು ಸತತ ಪಯತ್ನದಿಂದ ಎಂಟು ವರ್ಷದ ಬಾಲಕನಿಗೆ ಮಾತು ಬರಿಸಿದ್ದಾರೆ.
ಡಗ್ಗನ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಅಕ್ಷಯ್ ಶರ್ಮಾ, ಸೀಳು ತುಟಿಯೊಂದಿಗೆ ಹುಟ್ಟಿದ್ದರು. ಮೂರು ವರ್ಷ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಬಾಲಕನಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಇದರ ಜೊತೆಗೆ ಭಾರತೀಯ ಸೇನೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುವ ಪೋಷಕರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರದಲ್ಲಿ ಇದ್ದರು.
ಎರಡು ತಿಂಗಳ ಹಿಂದೆ, ಆ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ವೈದ್ಯ ಕ್ಯಾಪ್ಟನ್ ಸೌರಭ್ ಸಲುಂಕೆ ಅವರು ಬಾಲಕ ಅಕ್ಷಯ್‌ನನ್ನು ಭೇಟಿಯಾಗಿ, ಆತನಿಗೆ ತರಬೇತಿ ನೀಡಿ ಮಾತು ಬರಿಸುವ ಜವಾಬ್ದಾರಿ ವಹಿಸಿಕೊಂಡರು. ಅಲ್ಲಿಂದ ಎರಡು ತಿಂಗಳ ಕಾಲ ಪ್ರತಿದಿನ ಎರಡರಿಂದ ಮೂರು ಗಂಟೆ ಅಕ್ಷಯ್ ಮಾತನಾಡುವಂತೆ ತರಬೇತಿ ನೀಡುತ್ತಿದ್ದರು. ಈ ರೀತಿ ಮಾಡುತ್ತ ಕೊನೆಗೂ ಎಂಟು ವರ್ಷದ ಬಾಲಕನಿಗೆ ಮಾತು ಬರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಕ್ಷಣಾ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್, ತರಬೇತಿಯು ಮೊದಲು ನಾಲಿಗೆ ಮತ್ತು ದವಡೆಯ ವ್ಯಾಯಾಮಗಳೊಂದಿಗೆ ಪ್ರಾರಂಭವಾಯಿತು ಮತ್ತು ಕ್ರಮೇಣ ಮೂಗಿನ ಮತ್ತು ಮೌಖಿಕ ಶಬ್ದಗಳನ್ನು ಪ್ರತ್ಯೇಕಿಸುವುದು, ತುಟಿ ಮತ್ತು ಅಂಗುಳು(ಪೆಲೇಟ್) ಶಬ್ದಗಳನ್ನು ಕಲಿಸುವುದು ಮತ್ತು ಅಂತಿಮವಾಗಿ ಗಂಟಲಿನ ಶಬ್ದಗಳನ್ನು ಉಚ್ಛರಿಸುವ ಅಭ್ಯಾಸದೊಂದಿಗೆ ಸಾಗಿತು ಎಂದರು.
ಕ್ಯಾಪ್ಟನ್ ಸಲುಂಕೆ ಮಾತನಾಡಿ, ಕೆಲ ತಿಂಗಳ ಹಿಂದೆ, ಇಲ್ಲಿನ ಅಧಿಕಾರಿಯೊಬ್ಬರು ನನಗೆ ಅಕ್ಷಯ್‌ನನ್ನು ಪರಿಚಯಿಸಿದರು. ಬಾಲಕ ಅಸ್ಪಷ್ಟ ಧ್ವನಿಯಲ್ಲಿ ಮಾತನಾಡುತ್ತಿದ್ದ. ಮೂಗಿನ ಶಬ್ದಗಳು ಮತ್ತು ಗಂಟಲಿನ ಶಬ್ದಗಳ ನಡುವಿನ ವ್ಯತ್ಯಾಸವನ್ನು ನಾನು ಬಾಲಕನಿಗೆ ತಿಳಿಸಿಕೊಟ್ಟೆ. ಕ್ರಮೇಣ ನಾನು ಬಾಲಕನಿಗೆ ತುಟಿಯಿಂದ ಉಚ್ಛಾರ ಮಾಡುವ ಶಬ್ದಗಳನ್ನು ಕಲಿಸಲು ಮುಂದಾದೆ. ಅದರ ನಂತರ ನಾನು ಅಕ್ಷಯ್ಗೆ ಪದಗಳ ಉಚ್ಛಾರಣೆ ಕಲಿಸಲು ಪ್ರಾರಂಭಿಸಿದೆ. ನಾವು ಹಿಂದಿ ಮತ್ತು ಇಂಗ್ಲಿಷ್ ವಾಕ್ಯಗಳನ್ನು ಮಾತನಾಡುವುದನ್ನು ಕಲಿಸಿದೆವು. ಕೊನೆಗೆ ಬಾಲಕ ಮಕ್ಕಳ ಕವಿತೆ ‘ಮಚ್ಲಿ ಜಲ್ ಕಿ ರಾಣಿ ಹೈ’ ಹಾಡಿದನು’ ಎಂದು ಹೇಳಿದರು.
‘ಮಗನಿಗೆ ಮಾತು ಬರುವಂತೆ ಮಾಡಿದ್ದಕ್ಕೆ ಅಕ್ಷಯ್ ತಾಯಿ ಸೇನಾ ವೈದ್ಯರಿಗೆ ಧನ್ಯವಾದ ತಿಳಿಸಿ, ‘ಈಗ ಮಗ ಅಕ್ಷಯ್ ಮಾತನಾಡುತ್ತಿದ್ದಾನೆ, ಅದು ನನಗೆ ತುಂಬಾ ಸಂತಸ ತಂದಿದೆ. ಅವನು ದೊಡ್ಡ ಅಧಿಕಾರಿಯಾಗಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಜಮ್ಮು ಡಿಫೆನ್ಸ್ ಪಿಆರ್ಒ, ಅಕ್ಷಯ್ ಕುಟುಂಬ ಮತ್ತು ಕ್ಯಾಪ್ಟನ್ ಸಲುಂಕೆ ಅವರೊಂದಿಗಿನ ಸಂತೋಷದ ಕ್ಷಣಗಳ ಫೋಟೋಗಳನ್ನು ಮತ್ತು ಮಾತು ಕಲಿಯುವಲ್ಲಿ ಅಕ್ಷಯ್ ಪ್ರಯಾಣ, ವೈದ್ಯರ ಪ್ರಯತ್ನಗಳು ಮತ್ತು ಕುಟುಂಬದ ಪ್ರತಿಕ್ರಿಯೆಯ ವಿಡಿಯೋವನ್ನು ”ಖಾಮೋಶ್ ಸಪ್ನೆ, ಅಬ್ ಬೊಲೆಂಗೆ’ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
‘ಕಥುವಾದ ಡಗ್ಗನ್ನಲ್ಲಿ ಒಬ್ಬ ಸೈನಿಕ ಕೇವಲ ರಕ್ಷಣೆ ನೀಡಲಿಲ್ಲ, ಸೀಳು ತುಟಿಯಿಂದ ಜನಿಸಿದ 8 ವರ್ಷದ ಅಕ್ಷಯ್ ಎಂಬ ಬಾಲಕನಿಗೆ ಮಾತನಾಡುವುದನ್ನು ಕಲಿಸಿದನು. ಒಂದು ಧ್ವನಿ ಸಿಕ್ತು, ಒಂದು ಜೀವನ ಬದಲಾಯಿತು. ಸೈನಿಕನ ಈ ಕಾರ್ಯವು ಇಡೀ ಸಮುದಾಯಕ್ಕೆ ಭರವಸೆ ಮೂಡಿಸಿದೆ. ಸೈನ್ಯವು ರಾಷ್ಟ್ರದ ಗಡಿಗಳನ್ನು ಕಾಪಾಡುವುದು ಮಾತ್ರವಲ್ಲದೇ, ಜನರ ಹೃದಯ ಸ್ಪರ್ಶಿಸುತ್ತಿದೆ ಎಂಬುದನ್ನು ಇದು ನೆನಪಿಸುತ್ತದೆ’ ಎಂದು ಹೇಳಿದ್ದಾರೆ.