ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ- ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ದಾಖಲೆ ನಿರ್ಮಿಸಿದ್ದಾರೆ. 28000 ಅಂತಾರಾಷ್ಟ್ರೀಯ ರನ್‌ಗಳ ಗಡಿ ದಾಟಿ ಕುಮಾರ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರಾಗಿದ್ದಾರೆ.
ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ, ಆತಿಥೇಯ ಭಾರತಕ್ಕೆ 301 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಭಾರತ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ.
ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಶತಕ ಹಾಗೂ 1 ಅರ್ಧಶತಕದೊಂದಿಗೆ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕುವುದರೊಂದಿಗೆ ಅನೇಕ ದಾಖಲೆಗಳನ್ನು ನಿರ್ಮಿಸಿದ್ದ ಕೊಹ್ಲಿ, ಈ ಪಂದ್ಯದಲ್ಲಿ 25 ರನ್ ಕಲೆಹಾಕಿದ ಕೂಡಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 28000 ರನ್‌ಗಳ ಗಡಿ ದಾಟಿದರು.
ತಮ್ಮ 557 ನೇ ಪಂದ್ಯ ಮತ್ತು 624 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ ಕೊಹ್ಲಿ, ಈ ಸಾಧನೆ ಮಾಡಿದ ಮೂರನೇ ಕ್ರಿಕೆಟ್ ಎನಿಸಿಕೊಂಡರು. ಆ ಬಳಿಕ ತಮ್ಮ ಖಾತೆಗೆ ಮತ್ತೆ 17 ರನ್ಗಳನ್ನು ಸೇರಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
ವಿರಾಟ್ ಕೊಹ್ಲಿಗೂ ಮೊದಲು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಲೆಜೆಂಡರಿ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ 28016 ರನ್ ಕಲೆಹಾಕಿದ್ದರು. ಇದೀಗ 28016 ರನ್‌ಗಳ ಗಡಿ ದಾಟಿರುವ ಕೊಹ್ಲಿ, ಲಂಕಾ ದಿಗ್ಗಜನ ದಾಖಲೆ ಮುರಿದು ಎರಡನೇ ಸ್ಥಾನಕ್ಕೇರಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಲೆಜೆಂಡರಿ ಆಟಗಾರ ಸಚಿನ್ ತೆಂಡೂಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬರೋಬ್ಬರಿ 34357 ರನ್ ಕಲೆಹಾಕಿದ್ದಾರೆ.

