ಮೊಟ್ಟೆ ಅಂದರೆ ಪೋಷಕಾಂಶಗಳ ಖಜಾನೆ! ದಿನಕ್ಕೆ ಒಂದು ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಶರೀರಕ್ಕೆ ಬೇಕಾದ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಅಮೈನೋ ಆಸಿಡ್‌ಗಳು ಲಭ್ಯವಾಗುತ್ತವೆ. ಆದರೆ ತಾಜಾ ಮೊಟ್ಟೆ ತಿನ್ನುವುದರಿಂದ ಮಾತ್ರ ಆರೋಗ್ಯ ಲಾಭ ಸಿಗುತ್ತದೆ. ಹಾಳಾದ ಅಥವಾ ಹಳೆಯ ಮೊಟ್ಟೆ ಸೇವನೆಯಿಂದ ಫುಡ್ ಪಾಯಿಸನಿಂಗ್ ಅಥವಾ ಬ್ಯಾಕ್ಟೀರಿಯಾ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಮೊಟ್ಟೆ ಖರೀದಿಸುವ ಮೊದಲು ಈ ಸರಳ ಲಕ್ಷಣಗಳನ್ನು ಗಮನಿಸಿದರೆ ನೀವು ಸೇಫ್.
- ದಿನಾಂಕ ಪರಿಶೀಲನೆ: ಸೂಪರ್ ಮಾರ್ಕೆಟ್ ಗಳಲ್ಲಿ ಖರೀದಿಸುವುದಾದರೆ ಪ್ಯಾಕಿಂಗ್ ದಿನಾಂಕ ನೋಡಿ. ಸಾಮಾನ್ಯವಾಗಿ ಮೊಟ್ಟೆ 4–5 ವಾರಗಳವರೆಗೆ ಫ್ರಿಜ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಅವಧಿ ಮೀರಿದ ಮೊಟ್ಟೆ ತಿನ್ನಬೇಡಿ.
- ಚಿಪ್ಪುಗಳಲ್ಲಿ ಬಿರುಕು ಅಥವಾ ಜಿಗುಟು: ಚಿಪ್ಪು ಒಡೆದಿದ್ದರೆ ಅಥವಾ ಮುಟ್ಟಿದಾಗ ಲೋಳೆಯಾಗಿ ಅನಿಸಿದರೆ, ಬ್ಯಾಕ್ಟೀರಿಯಾ ಬೆಳವಣಿಗೆ ಆಗಿದೆ ಎಂದರ್ಥ. ಅಂತಹ ಮೊಟ್ಟೆಗಳನ್ನು ತಕ್ಷಣ ಎಸೆದುಬಿಡಿ.
- ನೀರಿನ ಪರೀಕ್ಷೆ: ಮೊಟ್ಟೆ ನೀರಿನಲ್ಲಿ ಮುಳುಗಿದರೆ ಅದು ಹೊಸದು. ತೇಲಿದರೆ ಹಳೆಯದು. ಇದು ಸೇವನೆಗೆ ಯೋಗ್ಯವಲ್ಲ.
- ವಾಸನೆ ಮತ್ತು ಬಣ್ಣ: ಮೊಟ್ಟೆ ಒಡೆದಾಗ ಗಂಧಕದ ವಾಸನೆ ಬಂದರೆ ಅಥವಾ ಹಳದಿ ಭಾಗ ಮಂದವಾಗಿದ್ದರೆ ಅದು ಹಾಳಾಗಿದೆ ಎಂದರ್ಥ.
- ಶಿಲೀಂಧ್ರ ಅಥವಾ ಬಣ್ಣ ಬದಲಾವಣೆ: ಚಿಪ್ಪಿನ ಮೇಲೆ ಬಿಳಿ ಪುಡಿ ಅಥವಾ ಒಳಭಾಗದಲ್ಲಿ ಹಸಿರು–ಗುಲಾಬಿ ಬಣ್ಣ ಕಂಡುಬಂದರೆ ತಿನ್ನಬೇಡಿ.

