ಇತ್ತೀಚಿನ ದಿನಗಳಲ್ಲಿ ಅಡುಗೆಮನೆಯಲ್ಲೊಂದು ದೊಡ್ಡ ಬದಲಾವಣೆ ನಡೆಯುತ್ತಿದೆ. ಅಲ್ಯೂಮಿನಿಯಂ ಪಾತ್ರೆಗಳ ಬದಲು ಬಹುತೇಕ ಮನೆಗಳು ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳತ್ತ ಮುಖ ಮಾಡಿವೆ. “ಸ್ಟೀಲ್ ಎಂದರೆ ಸುರಕ್ಷಿತ” ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ, ಸ್ಟೀಲ್ ಪಾತ್ರೆಗಳಲ್ಲಿಯೂ ಅಡುಗೆ ಮಾಡುವಾಗ ಕೆಲವು ಜಾಗರೂಕತೆಗಳನ್ನು ಪಾಲಿಸದಿದ್ದರೆ, ಅವು ಆರೋಗ್ಯಕ್ಕೂ ಹಾಗೂ ಪಾತ್ರೆಯ ಗುಣಮಟ್ಟಕ್ಕೂ ಹಾನಿ ಉಂಟುಮಾಡಬಹುದು. ಸರಿಯಾದ ಬಳಕೆ ಮಾಡಿದರೆ ಮಾತ್ರ ಸ್ಟೀಲ್ ಪಾತ್ರೆಗಳು ನಿಜಕ್ಕೂ ಆರೋಗ್ಯಕರ ಆಯ್ಕೆಯಾಗುತ್ತವೆ. ಅಂದಹಾಗೆ, ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಹೆಚ್ಚಿನ ಉರಿಯಲ್ಲಿ ಅಡುಗೆ ತಪ್ಪಿಸಿ
ಹೊಸ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ಹೆಚ್ಚಿನ ಉರಿಯಲ್ಲಿ ಅಡುಗೆ ಮಾಡಿದರೆ ಆಹಾರ ಸುಲಭವಾಗಿ ಅಂಟಿಕೊಳ್ಳುತ್ತದೆ ಮತ್ತು ಸುಟ್ಟುಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಟೀಲ್ ಪಾತ್ರೆಗಳಿಗೆ ಟೆಫ್ಲಾನ್ ಅಥವಾ ನಾನ್-ಸ್ಟಿಕ್ ಲೇಪನವಿಲ್ಲದ ಕಾರಣ, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಅಡುಗೆ ಮಾಡುವುದು ಉತ್ತಮ. ಇದರಿಂದ ಆಹಾರದ ರುಚಿಯೂ ಉಳಿಯುತ್ತದೆ, ಪಾತ್ರೆಯೂ ಸುರಕ್ಷಿತವಾಗಿರುತ್ತದೆ.
ತೆಳುವಾದ ಸ್ಟೀಲ್ ಪಾತ್ರೆಯಲ್ಲಿ ಗ್ರಿಲ್ಲಿಂಗ್ ಬೇಡ
ತೆಳುವಾದ ಸ್ಟೀಲ್ ಪ್ಯಾನ್‌ಗಳನ್ನು ಗ್ರಿಲ್ಲಿಂಗ್‌ಗೆ ಬಳಸುವುದು ಸರಿಯಲ್ಲ. ದೀರ್ಘಕಾಲ ಜ್ವಾಲೆಯ ಮೇಲೆ ಇಡುವುದರಿಂದ ಲೋಹದ ರಚನೆ ಹಾನಿಗೊಳಗಾಗಬಹುದು. ಇದು ಪಾತ್ರೆಯ ಆಯುಷ್ಯ ಕಡಿಮೆಯಾಗಲು ಕಾರಣವಾಗುತ್ತದೆ.
ಸ್ಟೀಲ್ ಪ್ಯಾನ್‌ನಲ್ಲಿ ಡೀಪ್ ಫ್ರೈ ಮಾಡಬೇಡಿ
ಸ್ಟೀಲ್ ಪಾತ್ರೆಗಳು ನಿರ್ದಿಷ್ಟ ‘ಸ್ಮೋಕ್ ಪಾಯಿಂಟ್’ ಹೊಂದಿರುತ್ತವೆ. ಡೀಪ್ ಫ್ರೈ ಮಾಡುವಾಗ ತೈಲ ಆ ಮಿತಿಯನ್ನು ಮೀರಿದರೆ ಪಾತ್ರೆಯ ಮೇಲ್ಮೈ ಹಳದಿ ಬಣ್ಣಕ್ಕೆ ತಿರುಗಬಹುದು ಅಥವಾ ಜಿಗುಟಾಗಬಹುದು. ಈ ಕಲೆ ಹೋಗುವುದು ಕಷ್ಟವಾಗುತ್ತದೆ ಮತ್ತು ಪಾತ್ರೆಯ ಗುಣಮಟ್ಟವೂ ಹಾಳಾಗುತ್ತದೆ.
ಸರಿಯಾದ ಬಳಕೆಯೇ ಸುರಕ್ಷತೆ
ಸ್ಟೀಲ್ ಪಾತ್ರೆಗಳು ಆರೋಗ್ಯಕರವೇ ಸರಿ, ಆದರೆ ಅವುಗಳನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಮಾತ್ರ. ಕಡಿಮೆ ಉರಿ, ಸರಿಯಾದ ಅಡುಗೆ ವಿಧಾನ ಮತ್ತು ಜಾಗರೂಕತೆ ಇವೇ ಆರೋಗ್ಯಕರ ಅಡುಗೆಮನೆಯ ನಿಜವಾದ ಗುಟ್ಟು.


