ಮೊಟ್ಟೆ ಎನ್ನುವುದು ಬಹುತೇಕರ ದಿನನಿತ್ಯದ ಬ್ರೇಕ್‌ಫಾಸ್ಟ್‌ನ ಭಾಗವಾಗಿದೆ. ಬೆಳಿಗ್ಗೆ ಒಂದು ಬೇಯಿಸಿದ ಮೊಟ್ಟೆ ತಿಂದರೆ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳ ಪೂರೈಕೆ ಆಗುತ್ತದೆ. ಫಿಟ್‌ನೆಸ್ ಪ್ರಿಯರು ಹೆಚ್ಚಾಗಿ ಮೊಟ್ಟೆ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ. ಕೆಲವರು ಹಸಿಯಾಗಿ ಮೊಟ್ಟೆ ಸೇವಿಸುವುದನ್ನೂ ಆಯ್ಕೆ ಮಾಡುತ್ತಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಬೇಯಿಸಿದ ಮೊಟ್ಟೆ ಹಸಿಯಾದ ಮೊಟ್ಟೆಯಿಗಿಂತ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಆದರೆ, ಅದನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುವ ಅಪಾಯವಿದೆ. ಹಾಗಾದರೆ ಬೇಯಿಸಿದ ಮೊಟ್ಟೆ ಎಷ್ಟು ದಿನ ಉಳಿಯುತ್ತದೆ ಮತ್ತು ಅದನ್ನು ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದನ್ನು ನೋಡೋಣ.
ಒಂದು ವಾರದೊಳಗೆ ಸೇವಿಸಿ:
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ಪ್ರಕಾರ, ಬೇಯಿಸಿದ ಮೊಟ್ಟೆಗಳನ್ನು ಒಂದು ವಾರದೊಳಗೆ ತಿನ್ನುವುದು ಸೂಕ್ತ. ಅದಕ್ಕೂ ಹೆಚ್ಚು ಕಾಲ ಉಳಿಸಿದರೆ ಬ್ಯಾಕ್ಟೀರಿಯಾಗಳ ಬೆಳವಣಿಗೆ ಸಾಧ್ಯತೆ ಇದೆ. ಸಿಪ್ಪೆ ತೆಗೆದಿಲ್ಲದಿದ್ದರೆ ಮೊಟ್ಟೆ ಹೆಚ್ಚು ಕಾಲ ತಾಜಾ ಇರುತ್ತದೆ. ಸಿಪ್ಪೆ ತೆಗೆದ ಮೊಟ್ಟೆಗಳು ಬ್ಯಾಕ್ಟೀರಿಯಾದಿಂದ ಬೇಗನೆ ಹಾಳಾಗುತ್ತವೆ.
ಫ್ರಿಜ್‌ನಲ್ಲಿ ಮಾತ್ರ ಸಂಗ್ರಹಿಸಿ:
ಬೇಯಿಸಿದ ಮೊಟ್ಟೆಗಳನ್ನು ಯಾವಾಗಲೂ ಫ್ರಿಜ್‌ನಲ್ಲಿ ಇಡಿ. ಬಿಸಿ ತಾಪಮಾನದಲ್ಲಿ ಇಟ್ಟರೆ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಮೊಟ್ಟೆಯ ವಾಸನೆ ಫ್ರಿಜ್‌ನ ಇತರ ಆಹಾರಗಳಲ್ಲಿ ಹೀರಿಕೊಳ್ಳದಂತೆ ಮಾಡಲು ಗಾಳಿಯಾಡದ ಡಬ್ಬಿಯನ್ನು ಬಳಸುವುದು ಸೂಕ್ತ.
ವಾಸನೆ ಪರೀಕ್ಷೆ ಅತ್ಯಗತ್ಯ:
ಮೊಟ್ಟೆಗಳನ್ನು ಒಂದು ವಾರಕ್ಕಿಂತ ಹೆಚ್ಚು ಕಾಲ ಫ್ರಿಜ್‌ನಲ್ಲಿ ಇಟ್ಟಿದ್ದರೆ ಅವುಗಳನ್ನು ಉಪಯೋಗಿಸುವ ಮೊದಲು ವಾಸನೆ ನೋಡಿ. ಕೆಟ್ಟ ವಾಸನೆ ಬರುವ ಮೊಟ್ಟೆಗಳನ್ನು ತಕ್ಷಣ ಬಿಸಾಕಿ.
ಹಸಿರು ಬಣ್ಣದ ಲೋಳೆ ಭಯಪಡಬೇಡಿ:
ಮೊಟ್ಟೆಯ ಹಳದಿ ಲೋಳೆಯ ಮೇಲೆ ಹಸಿರು ಬಣ್ಣ ಕಾಣಿಸಬಹುದು. ಅದು ಹಾಳಾಗುವ ಸೂಚನೆಯಲ್ಲ, ಅದು ಕಬ್ಬಿಣ ಮತ್ತು ಹೈಡ್ರೋಜನ್ ಸಲ್ಫೈಡ್ ನಡುವಿನ ನೈಸರ್ಗಿಕ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ. ಇದರಿಂದ ಮೊಟ್ಟೆ ಹೆಚ್ಚು ಬೆಂದಿದೆ ಎಂದರ್ಥ. ತಿನ್ನಲು ಅಪಾಯಕಾರಿಯಲ್ಲ, ಆದರೆ ಅದರ ಬಣ್ಣ ವಿಚಿತ್ರವಾಗಿ ಕಾಣಬಹುದು.
ಕಪ್ಪು ಅಥವಾ ಕಂದು ಕಲೆ ಇದ್ದರೆ ತಿನ್ನಬೇಡಿ:
ಮೊಟ್ಟೆಯ ಬಿಳಿ ಅಥವಾ ಹಳದಿ ಭಾಗದಲ್ಲಿ ಕಪ್ಪು, ಕಂದು ಅಥವಾ ಗಾಢ ಹಸಿರು ಕಲೆ ಕಂಡುಬಂದರೆ ಅದು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಪ್ರಭಾವದ ಸೂಚನೆ. ಅಂತಹ ಮೊಟ್ಟೆಗಳನ್ನು ತಿನ್ನಬಾರದು, ಏಕೆಂದರೆ ಅದು ಆಹಾರ ವಿಷಕಾರಿ ಸೋಂಕಿಗೆ ಕಾರಣವಾಗಬಹುದು.
ಒಟ್ಟಿನಲ್ಲಿ, ಬೇಯಿಸಿದ ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸಿದರೆ ಅವು ಪೋಷಕಾಂಶ ಕಳೆದುಕೊಳ್ಳದೆ ಒಂದು ವಾರದವರೆಗೆ ಸುರಕ್ಷಿತವಾಗಿ ಉಪಯೋಗಿಸಬಹುದು. ಆದರೆ ಸ್ವಚ್ಛತೆ, ತಾಪಮಾನ ಮತ್ತು ಸಂಗ್ರಹಣೆಯ ವಿಧಾನವನ್ನು ಸರಿಯಾಗಿ ಪಾಲಿಸುವುದು ಅತ್ಯಂತ ಮುಖ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

