ಚಳಿಗಾಲ ಬಂದರೆ ಹವಾಮಾನ ಮನಸ್ಸಿಗೆ ಹಿತ ನೀಡುತ್ತದೆ, ಆದರೆ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕೆಲವು ಸವಾಲುಗಳನ್ನು ತರುತ್ತದೆ. ಅಡುಗೆ ಮಾಡಿದ ಆಹಾರ ಕ್ಷಣಾರ್ಧದಲ್ಲೇ ತಣ್ಣಗಾಗುವುದು ಈ ಋತುವಿನ ಸಾಮಾನ್ಯ ಸಮಸ್ಯೆ. ಮತ್ತೆ ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೂ ರುಚಿಗೂ ಒಳ್ಳೆಯದಲ್ಲ. ಪೋಷಕಾಂಶ ಕಳೆದುಹೋಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಆಹಾರವನ್ನು ಸಹಜವಾಗಿ ಹೆಚ್ಚು ಸಮಯ ಬೆಚ್ಚಗಿರಿಸುವ ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಬಹಳ ಉಪಯುಕ್ತ.
- ಥರ್ಮಲ್ ಬ್ಯಾಗ್ ಬಳಕೆ: ಥರ್ಮಲ್ ಬ್ಯಾಗ್‌ಗಳು ಆಹಾರವನ್ನು ದೀರ್ಘಕಾಲ ಬಿಸಿಯಾಗಿಡಲು ಅತ್ಯುತ್ತಮ. ಅಡುಗೆಯನ್ನು ಪಾತ್ರೆಯೊಂದಿಗೆ ಬ್ಯಾಗ್ ಒಳಗೆ ಇಟ್ಟು ಮುಚ್ಚಿದರೆ ಶಾಖ ಹೊರಗೆ ಹೋಗುವುದಿಲ್ಲ. ಕೆಲಸಕ್ಕೆ ಅಥವಾ ಪ್ರಯಾಣಕ್ಕೆ ಹೋಗುವವರಿಗೆ ಇದು ಬಹಳ ಅನುಕೂಲ.
- ಕಂಚು ಮತ್ತು ಹಿತ್ತಾಳೆ ಪಾತ್ರೆಗಳು: ಚಳಿಗಾಲದಲ್ಲಿ ಆಹಾರ ಸಂಗ್ರಹಕ್ಕೆ ಕಂಚು ಅಥವಾ ಹಿತ್ತಾಳೆ ಪಾತ್ರೆಗಳು ಉತ್ತಮ ಆಯ್ಕೆ. ಅನ್ನ, ಸಾರು, ತರಕಾರಿ ಅಥವಾ ಬೇಳೆ ಪದಾರ್ಥಗಳನ್ನು ಇದರಲ್ಲಿ ಇಟ್ಟರೆ ತಾಪಮಾನ ಹೆಚ್ಚು ಕಾಲ ಉಳಿಯುತ್ತದೆ.
- ಆಲ್ಯೂಮಿನಿಯಂ ಫಾಯಿಲ್ ಉಪಯೋಗ: ಚಪಾತಿ, ರೊಟ್ಟಿ ಅಥವಾ ಪರೋಟಾ ಮಾಡಿದ ಬಳಿಕ ಮೊದಲು ಕಾಗದದಲ್ಲಿ ಸುತ್ತಿ, ನಂತರ ಆಲ್ಯೂಮಿನಿಯಂ ಫಾಯಿಲ್‌ನಲ್ಲಿ ಮಡಚಿ ಇಡಿ. ಹೀಗೆ ಮಾಡಿದರೆ ಬೆಳಗ್ಗೆ ತಯಾರಿಸಿದ ಆಹಾರ ಮಧ್ಯಾಹ್ನದವರೆಗೂ ಬೆಚ್ಚಗಿರುತ್ತದೆ. ವಿಶೇಷವಾಗಿ ಲಂಚ್ ಬಾಕ್ಸ್‌ಗೆ ಇದು ಬಹಳ ಸಹಾಯಕ.
- ಮುಚ್ಚಳದ ಮಹತ್ವ: ಯಾವ ಪಾತ್ರೆಯಲ್ಲಾದರೂ ಆಹಾರ ಇಡುವಾಗ ಸರಿಯಾಗಿ ಮುಚ್ಚಳ ಹಾಕುವುದು ಅಗತ್ಯ. ಇದು ತಾಪಮಾನ ಕಾಪಾಡುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.
ಈ ಸಣ್ಣ–ಸಣ್ಣ ಕ್ರಮಗಳನ್ನು ಪಾಲಿಸಿದರೆ, ಚಳಿಗಾಲದಲ್ಲೂ ಆಹಾರ ಬಿಸಿ, ರುಚಿ ಮತ್ತು ಆರೋಗ್ಯವನ್ನು ಒಂದೇ ಸಮಯದಲ್ಲಿ ಕಾಪಾಡಿಕೊಳ್ಳಬಹುದು.

