Wednesday, September 3, 2025

Kitchen Tips | ಮಳೆಗಾಲದಲ್ಲಿ ಹುಣಸೆಹಣ್ಣು ತಿಂಗಳುಗಟ್ಟಲೆ ಹಾಳಾಗದಂತೆ ಸಂಗ್ರಹಿಸಿಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಅಡುಗೆಮನೆಯಲ್ಲಿನ ಅನೇಕ ವಸ್ತುಗಳು ಬೇಗನೆ ಹಾಳಾಗುತ್ತವೆ. ಅದರಲ್ಲೂ ಹುಣಸೆಹಣ್ಣು ತ್ವರಿತವಾಗಿ ಹಾಳಾಗುವ ಪ್ರಮುಖ ಪದಾರ್ಥ. ಸಾಂಬಾರ್, ರಸಂ, ಚಟ್ನಿ ಹಾಗೂ ಸಾರುಗಳಲ್ಲಿ ಅದರ ವಿಶಿಷ್ಟ ರುಚಿ ಅನಿವಾರ್ಯವಾದ್ದರಿಂದ, ಇದನ್ನು ತಾಜಾ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಅಗತ್ಯ. ಬೇಸಿಗೆ ಮತ್ತು ಚಳಿಗಾಲದಲ್ಲಿ ಇದು ಹೆಚ್ಚು ದಿನಗಳವರೆಗೆ ಉಳಿದರೂ, ಮಳೆಗಾಲದಲ್ಲಿ ಶಿಲೀಂಧ್ರಗಳ ಬೆಳವಣಿಗೆ ಮತ್ತು ಜಿಗುಟಾದ ಸ್ವಭಾವದಿಂದ ಹಾಳಾಗುವ ಸಂಭವ ಜಾಸ್ತಿ. ಈ ಸಮಸ್ಯೆಗೆ ಕೆಲವು ಪರಿಣಾಮಕಾರಿ ಪರಿಹಾರ ಮಾರ್ಗಗಳಿವೆ.

ರೆಫ್ರಿಜರೇಟರ್ ಬಳಕೆ:
ಹೆಚ್ಚಿನ ಪ್ರಮಾಣದ ಹುಣಸೆಹಣ್ಣು ಇದ್ದಲ್ಲಿ ಅದನ್ನು ಫ್ರಿಜ್‌ನಲ್ಲಿ ಇಡುವುದು ಅತ್ಯುತ್ತಮ ವಿಧಾನ. ಝಿಪ್-ಲಾಕ್ ಪೌಚ್ ಅಥವಾ ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ ಶೆಲ್ಫ್ ಲೈಫ್ ಹೆಚ್ಚುತ್ತದೆ ಮತ್ತು ತಿಂಗಳವರೆಗೆ ತಾಜಾವಾಗಿರುತ್ತದೆ.

ಗಾಳಿಯಾಡದ ಕಂಟೇನರ್:
ತೇವಾಂಶವೇ ಹುಣಸೆಹಣ್ಣಿನ ದೊಡ್ಡ ಶತ್ರು. ಹೀಗಾಗಿ ಗಾಳಿಯಾಡದ ಕಂಟೇನರ್ ಬಳಸುವುದರಿಂದ ತೇವಾಂಶ ಪ್ರವೇಶವಾಗುವುದಿಲ್ಲ. ಇದರಿಂದ ಶಿಲೀಂಧ್ರದ ಬೆಳವಣಿಗೆ ತಡೆಯಬಹುದು.

ಗಾಜಿನ ಜಾಡಿಗಳು:
ದೀರ್ಘಕಾಲ ಸಂಗ್ರಹಣೆಗೆ ಗಾಜಿನ ಜಾಡಿಗಳು ಸೂಕ್ತ. ಪ್ಲಾಸ್ಟಿಕ್ ಅಥವಾ ಲೋಹದ ಕಂಟೇನರ್‌ಗಳಿಗಿಂತ ಗಾಜು ಹೆಚ್ಚು ಸುರಕ್ಷಿತವಾಗಿದ್ದು, ಆಹಾರದೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಸ್ವಚ್ಛ ಮತ್ತು ಒಣ ಜಾಡಿಯಲ್ಲಿ ಇಟ್ಟರೆ ಹುಣಸೆಹಣ್ಣಿನ ನೈಸರ್ಗಿಕ ರುಚಿ ಉಳಿಯುತ್ತದೆ.

ಹುಣಸೆಹಣ್ಣಿನ ಪೇಸ್ಟ್:
ಮನೆಯಲ್ಲಿ ಪೇಸ್ಟ್ ತಯಾರಿಸುವುದೂ ಉತ್ತಮ ಮಾರ್ಗ. ಹುಣಸೆಹಣ್ಣಿನ ಬೀಜ ತೆಗೆದು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ, ತಿರುಳನ್ನು ಬೇರ್ಪಡಿಸಿ ಜರಡಿ ಮೂಲಕ ಶೋಧಿಸಿ. ಈ ಪೇಸ್ಟ್ ಫ್ರಿಜ್‌ನಲ್ಲಿ ಹೆಚ್ಚು ದಿನ ಉಳಿಯುತ್ತದೆ.

ಇದನ್ನೂ ಓದಿ