ಹೊಸದಿಗಂತ ಮಂಗಳೂರು:
ಕರಾವಳಿ ಉತ್ಸವದ ಸಂಭ್ರಮಕ್ಕೆ ಇದೀಗ ಬಣ್ಣದ ಮೆರುಗು ಸಿಗಲಿದೆ. ನಗರದ ನವೀಕೃತ ತಣ್ಣೀರುಬಾವಿ ‘ಬ್ಲೂ ಬೇ ಬೀಚ್’ನಲ್ಲಿ ಜನವರಿ 17 ಮತ್ತು 18 ರಂದು 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಅದ್ದೂರಿಯಾಗಿ ನಡೆಯಲಿದೆ. ಹವ್ಯಾಸಿ ಗಾಳಿಪಟ ತಂಡವಾದ ‘ಟೀಮ್ ಮಂಗಳೂರು’ ಈ ಉತ್ಸವವನ್ನು ಒಎನ್‌ಜಿಸಿ-ಎಂಆರ್‌ಪಿಎಲ್ (ONGC-MRPL) ಪ್ರಾಯೋಜಕತ್ವದಲ್ಲಿ ಆಯೋಜಿಸುತ್ತಿದೆ.
ಈ ಬೃಹತ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಜನವರಿ 10 ರಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಗಾಳಿಪಟವನ್ನು ಎತ್ತಿ ಹಿಡಿಯುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್, ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಬಾರಿಯ ಉತ್ಸವದಲ್ಲಿ ಒಟ್ಟು 14 ಅಂತಾರಾಷ್ಟ್ರೀಯ ತಂಡಗಳು ಮತ್ತು 8 ರಾಷ್ಟ್ರೀಯ ಗಾಳಿಪಟ ತಂಡಗಳು ಭಾಗವಹಿಸುತ್ತಿವೆ. ವೈವಿಧ್ಯಮಯ ವಿನ್ಯಾಸದ ಬೃಹತ್ ಗಾಳಿಪಟಗಳು ಮಂಗಳೂರಿನ ಆಕಾಶದಲ್ಲಿ ಹಾರಾಡಲಿವೆ.
ಕೇವಲ ಮನರಂಜನೆಯಷ್ಟೇ ಅಲ್ಲದೆ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ನೇಹ ಬಾಂಧವ್ಯವನ್ನು ವೃದ್ಧಿಸುವ ಗುರಿಯನ್ನು ಈ ಉತ್ಸವ ಹೊಂದಿದೆ. ನವೀಕರಣಗೊಂಡ ಬ್ಲೂ ಬೇ ಬೀಚ್‌ನಲ್ಲಿ ನಡೆಯುತ್ತಿರುವ ಮೊದಲ ಬೃಹತ್ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಸಾಂಸ್ಕೃತಿಕ ಮತ್ತು ಮನರಂಜನೆಯ ರಸದೌತಣ ನೀಡಲು ಸಕಲ ಸಿದ್ಧತೆಗಳು ನಡೆದಿವೆ.



